ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವು: 24 ಗಂಟೆಯೊಳಗೆ ಮೂವರು ಮಹಿಳೆಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ಅವರು ಜುಲೈ 5ರಂದು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ಬೆಳಿಗ್ಗೆ ಸುಮಾರು 8.20 ಗಂಟೆಗೆ ದೇವಸ್ಥಾನದ ಹೊರಾಂಗಣಕ್ಕೆ ಬಂದ ವೇಳೆ ನಿಮಿಶಾ ಅವರ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ಪರ್ಸ್ ಹಾಗೂ ಅದರೊಳಗಿದ್ದ ₹80 ಸಾವಿರ ನಗದು ಕಾಣೆಯಾಗಿರುವುದು ತಿಳಿದುಬಂದಿದೆ.

ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದರೂ ಹಣ ಹಾಗೂ ಪರ್ಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಮಿಶಾ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಅಪರಾಧ ಕ್ರಮಾಂಕ 43/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಅವರ ನಿರ್ದೇಶನದಲ್ಲಿ, ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ, ತನಿಖಾ ಪಿಎಸ್‌ಐ ಭೀಮಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದರು.

ಸಿಸಿಟಿವಿ ದೃಶ್ಯಾವಳಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸೆರೆಹಿಡಿದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು.

ಬಂಧಿತ ಆರೋಪಿಗಳು:

ನೇತ್ರಾವತಿ (33), ಹೊಸಮನೆ, 4ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ಶಾರದ (50), ಉಡುಗಲಮ್ಮ ದೇವಸ್ಥಾನದ ಸಮೀಪ, ಭೋವಿ ಕಾಲೋನಿ, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ದುರ್ಗಮ್ಮ (44), ಹೊಸ ಭೋವಿ ಕಾಲೋನಿ, ಉಡುಗಲಮ್ಮ ದೇವಸ್ಥಾನದ ಸಮೀಪ, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ಮೂರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿತೆ ದುರ್ಗಮ್ಮ ವಿರುದ್ಧ ಮೈಸೂರು ಲಷ್ಕರ್ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಇನ್ನೋರ್ವ ಆರೋಪಿತೆ ಶಾರದ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಮೈಸೂರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಕೊಲ್ಲೂರು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!