ಸಿನಿಮೀಯ ರೀತಿ ಎರಡೆರಡು ಬಾರಿ ಡಿಕ್ಕಿ ಹೊಡೆದ ಖಾಸಗಿ ಬಸ್ ಚಾಲಕನ ದರ್ಪದ ವಿರುದ್ಧ ವ್ಯಾಪಕ ಆಕ್ರೋಶ

ಉಡುಪಿ, ಜು.5: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌‌ನ ಚಾಲಕ ಇನ್ನೊಂದು ಬಸ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಭೀತಿ ಹುಟ್ಟಿಸಿದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಲ್ಪೆ ಬಡನಿಡಿಯೂರಿನ ಕೆ. ವೈಭವ್ ಪೈ (21) ಅವರು ನೀಡಿದ ದೂರಿನ ಪ್ರಕಾರ, ಅವರು ಚಾಲನೆ ಮಾಡುತ್ತಿದ್ದ ಕೆಎ-19-ಡಿ-8000 ಸಂಖ್ಯೆಯ ಬಸ್ ಜುಲೈ 4ರಂದು ರಾತ್ರಿ 9.15ರ ಸುಮಾರಿಗೆ ಉಡುಪಿಯಿಂದ ಕೆಮ್ಮಣ್ಣು–ಹೂಡೆ ಮಾರ್ಗಕ್ಕೆ ಹೊರಡಲು ಸಿದ್ಧವಾಗಿತ್ತು. ಇದೇ ವೇಳೆ ಮುಂಭಾಗದಲ್ಲಿ ಕೆಎ-19-ಸಿ-6852 ಸಂಖ್ಯೆಯ ಬಸ್ ನಿಂತಿತ್ತು. ನಿಗದಿತ ಸಮಯವಾದ ರಾತ್ರಿ 8.53ಕ್ಕೆ ಹೊರಡಬೇಕಿದ್ದ ಬಸ್ ರಾತ್ರಿ 9 ಗಂಟೆಯಾದರೂ ಹೊರಡದ ಹಿನ್ನೆಲೆಯಲ್ಲಿ ವಿಚಾರಿಸಿದಾಗ, ಬಸ್ ಕೆಟ್ಟು ಸ್ಟಾರ್ಟ್ ಆಗುತ್ತಿಲ್ಲ ಹಾಗೂ ಹೂಡೆಗೆ ತೆರಳುವುದಿಲ್ಲ ಎಂದು ತಿಳಿಸಲಾಗಿತ್ತು.

ಬಳಿಕ ತಮ್ಮ ಬಸ್ ಅನ್ನು ಮುಂದೆ ಚಲಾಯಿಸಿ ನಿಲ್ಲಿಸಿದ ಸಂದರ್ಭದಲ್ಲಿ, ಎದುರಿನ ಬಸ್ ಚಾಲಕ ಸಲ್ಮಾನ್ ಉದ್ದೇಶಪೂರ್ವಕವಾಗಿ ತಮ್ಮ ಬಸ್ ಮುಂದೆ ಸಾಗದಂತೆ ತಡೆಯುವ ಉದ್ದೇಶದಿಂದ ಬಸ್‌ನ ಎಡಭಾಗಕ್ಕೆ ಎರಡು ಬಾರಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯಿಂದ ಬಸ್‌ಗೆ ಸುಮಾರು ₹1.50 ಲಕ್ಷ ಮೌಲ್ಯದ ಹಾನಿಯಾಗಿದ್ದು, ಬಳಿಕ ಬಸ್‌ನ ಕಂಡಕ್ಟರ್‌ಗಳಾದ ರೋಷನ್, ಶಾರುಖ್, ಅಫ್ರೋಜ್ ಹಾಗೂ ನವಾಜ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 84/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 324(3), 352, 351(2) ಹಾಗೂ 190ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಡಿದು ಬಸ್ ಚಲಾಯಿಸುವ ಚಾಲಕರು:

ನಗರದ ಹೆಚ್ಚಿನ ಬಸ್‌ನ ಚಾಲಕರು‌ ಮದ್ಯಸೇವಿಸಿ ಬಸ್ ಚಲಾಯಿಸುವ ದೂರುಗಳು ನಿರಂತರ ಕೇಳಿಬರುತ್ತಿದೆ. ಈಗಾಗಲೇ ಹಲವು ಅಪಘಾತಗಳು ನಡೆದ ಉದಾಹರಣೆ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಜನರ ಜೀವಕ್ಕಿಂತ ಇವರಿಗೆ ತಮ್ಮ ಮೇಲಾಟವೇ ಹೆಚ್ಚಾಗಿ ತೋರಿಸಲು ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುವಂತಿರುತ್ತಾರೆ ಎಂದು ದೂರಿದ್ದಾರೆ ಪ್ರಯಾಣಿಕರು.

ಪ್ರಯಾಣಿಕರನ್ನು ಇಳಿಸಿ ಸಿನಿಮೀಯ ಮಾದರಿ ಡಿಕ್ಕಿ ಹೊಡೆದು ದರ್ಪ ಮೆರೆದ ಚಾಲಕನ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತನ ಚಾಲನಾ ಪರವಾನಿಗೆ ಶಾಶ್ವತವಾಗಿ ರದ್ದುಗೊಳಿಸಿಬೇಕೆಂಬ ಆಗ್ರಹ ಕೇಳಿಬಂದಿದೆ. ಇದೇ ರೀತಿ ಪ್ರತಿ ನಿತ್ಯ ಚಾಲಕರು ಮದ್ಯ ಸೇವಿದ್ದಾರೆಯೇ ಎಂಬ ಡೋಪ್ ಟೆಸ್ಟ್ ಪೊಲೀಸರು ನಡೆಸಬೇಕೆಂದು ಪ್ರಯಾಣಿಕರ ಒತ್ತಾಯಿಸಿದ್ದಾರೆ. ಕೆಲವು ಚಾಲಕರು ಗಾಂಜಾ ಸೇವಿಸಿ ಬಸ್ ಚಾಲನೆ ಮಾಡುವ ಬಗ್ಗೆಯೂ ದೂರುಗಳು ಇದೆ.

ಆರ್‌ಟಿಓ ನಿಯಮಕ್ಕೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು: ನಿಯಮದ ಪ್ರಕಾರ ರಿಜಿಸ್ಟರ್ ನಂಬರ್ ಇರುವ ಬಸ್ಸು ಅದೇ ಪರ್ಮಿಟ್ಗೆ ಓಡಿಸಬೇಕು. ಆದರೆ ಇಲ್ಲಿ ಯಾವುದೋ ಪರ್ಮಿಟ್ ಯಾವುದೋ ಬಸ್ ಓಡಿಸುತ್ತಾ ಇದ್ದಾರೆ ಎಂಬ ದೂರುಗಳು ಇದೆ.
ಯುನಿಫಾರ್ಮ್ ಇಲ್ಲದ ನಿರ್ವಹಕರು, ಚಾಲಕರು. ಹೆಚ್ಚಿನ ನಿರ್ವಾಹಕರಿಗೆ ಲೈಸೆನ್ಸ್ ಇಲ್ಲ. ಬಸ್ಸಲ್ಲಿ ಕಂಡಕ್ಟರ್ ಯಾರು ಸ್ಟೂಡೆಂಟ್ ಯಾರು ಅಂತ ತಿಳಿಯುವುದೇ ಇಲ್ಲ. ಕೆಲವರಂತೂ ರೌಡಿಗಳಂತೆ ಪ್ರಯಾಣಿಕರಲ್ಲಿ ವರ್ತಿಸವ ಬಗ್ಗೆ ಸ್ಥಳೀಯರು ದೂರುತ್ತಾರೆ.

ಹೈಕೋರ್ಟ್ ಆದೇಶಕ್ಕೂ ಇಲ್ಲಿ ಕ್ಯಾರೇ ಅನ್ನಲ್ಲ ಬಸ್ ಮಾಲಕರು ಆರು ತಿಂಗಳು ಕಳೆದರೂ ಬಸ್‌ಗಳಿಗೆ ಬಾಗಿಲು ಇಲ್ಲ. ಕಲೆಕ್ಷನ್ ಹೆಚ್ಚು ಕೊಡುವ ವಿಚಾರದಲ್ಲಿ ಟೈಮಿಂಗ್ ವಿಚಾರದಲ್ಲಿ ಯಾವಾಗಲೂ ಬಸ್ಸುಗಳನ್ನು ಅಲ್ಲಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿ ಬಾಯಿಗೆ ಬಂದಂತೆ ಸಾರ್ವಜನಿಕರ ಸ್ಥಳದಲ್ಲಿ ಬೈದಾಡುಕೊಳ್ಳುವುದು ಇದೆಲ್ಲವೂ ಪೊಲೀಸರ ಸಲಿಗೆಯಿಂದ ಎನ್ನುವುದು ಸಾರ್ವಜನಿಕರ ಆರೋಪ. ತಮ್ಮ ಮಾಮೂಲಿ ಪಡೆದು ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಇದ್ದರೆ ಮುಂದೆ ಆಗುವ ಸಾವು ನೋವುಗಳಿಗೆ ಯಾರು ಹೊಣೆ. ಪೊಲೀಸರು ಇವರನ್ನೆಲ್ಲ ಒಮ್ಮೆ ಪರೇಡ್ ಮಾಡಿ ಬುದ್ದಿವಾದ ಹೇಳಿ ಮುಂದೆ ಕಠಿಣವಾದ ಕ್ರಮ ಕೈಗೊಂಡರ ಮಾತ್ರ ಇದು ಶಾಶ್ವತವಾಗಿ ನಿಲ್ಲಲು ಸಾಧ್ಯವಿದೆ.

Leave a Reply

Your email address will not be published. Required fields are marked *

error: Content is protected !!