ಮಣಿಪಾಲ ಶಾಲಾ ಬಸ್ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕಂಡಕ್ಟರ್‌ನೇ ಚಾಲಕ, ಸುಳ್ಳು ದೂರು ನೀಡಿದಾತನ ಬಂಧನ

ಉಡುಪಿ, ಜು. 4: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಸರ್ಕಲ್ ಸಮೀಪದ ಸೆಂಟ್ರಲ್ ಪಾರ್ಕ್ ಹೋಟೆಲ್ ಎದುರು ಕಳೆದ ಜೂನ್ 25ರಂದು ನಡೆದ ಶಾಲಾ ಬಸ್ ಅಪಘಾತ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ಬಸ್ ಚಾಲಕ ರಿಜ್ವಾನ್ ವಾಹನ ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ದೂರು ದಾಖಲಾಗಿದ್ದರೂ, ತನಿಖೆಯಲ್ಲಿ ಶಾಲಾ ಬಸ್ ಕಂಡಕ್ಟರ್ ಮಹಮ್ಮದ್ ರಾಹಿಜ್ ಅವರೇ ಬಸ್ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಬೆಳಿಗ್ಗೆ ಸುಮಾರು 8.05ಕ್ಕೆ ಪೆರಂಪಳ್ಳಿಯ ಅಲ್ ಇಬಾದ್ ಇಂಡಿಯನ್ ಶಾಲೆಗೆ ಸೇರಿದ KA-19-AB-5977 ಸಂಖ್ಯೆಯ ಶಾಲಾ ಬಸ್ ರಾಷ್ಟ್ರೀಯ ಹೆದ್ದಾರಿ 169(A)ರ ಸಿಂಡಿಕೇಟ್ ಸರ್ಕಲ್ ಡೌನ್ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಕೆಲವು ಶಾಲಾ ಮಕ್ಕಳಿಗೆ ಗಾಯಗಳಾಗಿದ್ದವು.

ಘಟನೆಯ ಬಳಿಕ ಬಸ್ ಕಂಡಕ್ಟರ್ ಮಹಮ್ಮದ್ ರಾಹಿಜ್, ತನ್ನ ತಂದೆ ಹಾಗೂ ಬಸ್ ಚಾಲಕ ರಿಜ್ವಾನ್ ವಾಹನ ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಆದರೆ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ವೇಳೆ, ಅಪಘಾತ ಸಂಭವಿಸಿದ ಸಮಯದಲ್ಲಿ ಮಹಮ್ಮದ್ ರಾಹಿಜ್ ಅವರೇ ಬಸ್ ಚಾಲನೆ ಮಾಡುತ್ತಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದಿರುವುದು ದೃಢಪಟ್ಟಿದೆ. ಅಲ್ಲದೆ, ಅವರಿಗೆ ಮಾನ್ಯ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಇರಲಿಲ್ಲ ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣಕ್ಕೆ ಹೆಚ್ಚುವರಿಯಾಗಿ ಬಿಎನ್‌ಎಸ್‌ನ 110 ಹಾಗೂ 229ನೇ ಕಲಂಗಳನ್ನು ಸೇರಿಸಿ ತನಿಖೆ ಮುಂದುವರಿಸಿದ್ದಾರೆ. ಚಾಲನಾ ಪರವಾನಗಿ ಇಲ್ಲದ ವ್ಯಕ್ತಿಗೆ ಶಾಲಾ ಬಸ್ ಚಲಾಯಿಸಲು ಅವಕಾಶ ನೀಡಿದ ಆರೋಪದಡಿ ವಾಹನದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಜುಲೈ 3ರಂದು ಆರೋಪಿತ ಮಹಮ್ಮದ್ ರಾಹಿಜ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದ ಕುರಿತು ಮಣಿಪಾಲ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!