ಮಲ್ಪೆ: ₹30.90 ಲಕ್ಷ ವಂಚನೆ ಆರೋಪ-ಬಿಜಿ ವೆಲ್ತ್ ಶೇರಿಂಗ್ ಹೆಸರಲ್ಲಿ ಹೂಡಿಕೆ ಪಡೆದು ಕಚೇರಿ ಮುಚ್ಚಿದ ಆರೋಪ
ಉಡುಪಿ: ಹೆಚ್ಚಿನ ಲಾಭದ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಕೋಡಿ ಗ್ರಾಮದ ಇಂದಿರಾ ಬಂಗೇರ (51) ಅವರು ನೀಡಿದ ದೂರಿನಂತೆ, 2026ರ ಜೂನ್ 19ರಂದು ಆರೋಪಿತರಾದ ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ ಎ. ಹಾಗೂ ರೋಹಿಣಿ ಅವರು ಅವರ ಮನೆಗೆ ಭೇಟಿ ನೀಡಿ, ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿರುವ ಬಿಜಿ ವೆಲ್ತ್ ಶೇರಿಂಗ್ (BG Wealth Sharing) ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿದ್ದಾರೆ. ಈ ಸಂಸ್ಥೆ ವಿದೇಶಿ ಕಂಪನಿಯಾಗಿದ್ದು, ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ ಡಾಲರ್ ರೂಪದಲ್ಲಿ ಐಡಿ ತೆರೆಯಲ್ಪಟ್ಟು ಹೂಡಿಕೆ ನಡೆಯುತ್ತದೆ ಎಂದು ವಿಶ್ವಾಸ ಮೂಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿತರ ಮಾತು ನಂಬಿದ ದೂರುದಾರರು ತಮ್ಮ ಕುಟುಂಬದ ಸದಸ್ಯರು ಹಾಗೂ ಇತರರ ಪರವಾಗಿ ಒಟ್ಟು ₹30.90 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡದೇ, ಕಚೇರಿಯನ್ನು ಮುಚ್ಚಿ ಆರೋಪಿತರು ಪರಾರಿಯಾಗಿದ್ದು, ತಮ್ಮೊಂದಿಗೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 76/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(2), 318(4) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





