ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ: ತರಕಾರಿ ಮಾರಿ ಆಕ್ರೋಶ
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ವತಿಯಿಂದ ‘ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆಗಳು- ಶಿಕ್ಷಕರು ಉಳಿದರೆ ಶಿಕ್ಷಣ’ ಎಂಬ ಘೋಷಣೆಯಡಿ ನಗರದಲ್ಲಿ ಬುಧವಾರ ಪ್ರತಿಭಟನಾ ರ್ಯಾಲಿ ನಡೆಯಿತು.
ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಶಿಕ್ಷಕರು ತರಕಾರಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
‘ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ, ಮೊದಲ ಹಂತದಲ್ಲಿಯೇ ಕೋವಿಡ್ ಲಸಿಕೆ ನೀಡಬೇಕು. ಆಹಾರ ಕಿಟ್, ಗೌರವಧನ ವಿತರಿಸಬೇಕು, ಪ್ರತ್ಯೇಕ ವಿಮೆ ಸೌಲಭ್ಯ ನೀಡಬೇಕು. ಶಿಕ್ಷಣ ಸಂಸ್ಥೆಗಳ ಮರು ಆರಂಭ, ದಾಖಲಾತಿ, ಹಾಜರಾಗಿ, ಕನಿಷ್ಠ ಮೌಲ್ಯಮಾಪನದ ತೇರ್ಗಡೆ, ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕವನ್ನು ಪಾವತಿಸುವ ಬಗ್ಗೆ ಸ್ಪಷ್ಟೀಕರಣ ಆದೇಶ ನೀಡಬೇಕು’ ಎಂದು ಪ್ರತಿಭಟನೆಕಾರರ ಆಗ್ರಹಿಸಿದ್ದಾರೆ.
‘ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವ ಬಗ್ಗೆ ಸರ್ಕಾರ ಸ್ಪಷ್ಟ ನೀತಿ ಹೊರಡಿಸಿಲ್ಲ. ಹೀಗಾಗಿ ರಾಜ್ಯದ ಶೇ 95ರಷ್ಟು ಖಾಸಗಿ ಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ’ ಎಂದೂ ಹೇಳಿದ್ದಾರೆ.
‘ಕಳೆದ 10 ತಿಂಗಳಿನಿಂದ ನಮಗೆ ಕೆಲವರಿಗೆ ವೇತನವೇ ಸಿಕ್ಕಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲು ಸರಿಯಾದ ನೀತಿ ಮಾಡಿಲ್ಲ. ನಾವು ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದೇವೆ. ಆದರೆ, ವೇತನ ಇಲ್ಲ. ಸರ್ಕಾರ ಶಿಕ್ಷಕರ ಕಷ್ಟವನ್ನು ಅರಿತುಕೊಂಡು ಆರ್ಥಿಕ ನೆರವು ನೀಡಬೇಕು’ ಎಂದು ಆಗ್ರಹಿಸಿದರು.