ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗದ ಮಹತ್ವ ಸಾರಿದ ಕಾರ್ಯಕ್ರಮ

ಉಡುಪಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಹಾಗೂ ಮಣಿಪಾಲದ ಮುನಿಯಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಅಂಡ್ ನ್ಯಾಚುರೋಪತಿ ಸಹಯೋಗದಲ್ಲಿ, ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಉಡುಪಿ ವತಿಯಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026 ಅನ್ನು ಭಾನುವಾರ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ವರ್ಷದ ಯೋಗ ದಿನಾಚರಣೆಯ ಧೈಯವಾಕ್ಯ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” (Yoga for Healthy Ageing) ಆಗಿದ್ದು, ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.

ಗೌರವ ಅತಿಥಿಯಾಗಿ ಮುನಿಯಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಅಂಡ್ ನ್ಯಾಚುರೋಪತಿ, ಮಣಿಪಾಲದ ಪ್ರಾಂಶುಪಾಲರಾದ ಡಾ. ಅಪರ್ಣಾ ಸುರೇಂದ್ರ ಉಪಸ್ಥಿತರಿದ್ದು, ಯೋಗದ ಆರೋಗ್ಯ ಪ್ರಯೋಜನಗಳು ಹಾಗೂ ಸಮಾಜದಲ್ಲಿ ಅದರ ಅಗತ್ಯತೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಉಡುಪಿಯ ಉಪಾಧ್ಯಕ್ಷೆ ಶ್ರೀಮತಿ ವಿಮಲಾ ಚಂದ್ರಶೇಖರ್ ಭಾಗವಹಿಸಿ, ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಆಡಳಿತಾಧಿಕಾರಿ ಡಾ. ಪ್ರಶಾಂತ್ ಹಾಗೂ ಶ್ರೀ ಆದರ್ಶ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಪ್ರೊ. ಸುದಿನಾ ಎಂ. ಉಪಸ್ಥಿತರಿದ್ದರು. ಬಿ.ಎಸ್‌ಸಿ. ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ (AHS) ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಯೋಗ ಶಿಬಿರದ ತರಬೇತುದಾರರಾದ ವಾಸವಿ, ಅನನ್ಯ ಇ.ಎಸ್. ಹಾಗೂ ವೈಷ್ಣವಿ ಅವರನ್ನು ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮುನಿಯಲ್ ಕಾಲೇಜ್ ಆಫ್ ಯೋಗ & ನ್ಯಾಚುರೋಪತಿಯ ಪ್ರಾಂಶುಪಾಲರಾದ ಡಾ. ಅಪರ್ಣಾ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಾಧ್ಯಾಪಕರಾದ ವಿನಯಾ ಮತ್ತು ನಿಶಾ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಯೋಗಾಭ್ಯಾಸವು ದೇಹದ ಚೈತನ್ಯವನ್ನು ಹೆಚ್ಚಿಸುವುದರ ಜೊತೆಗೆ ಒತ್ತಡ ನಿವಾರಣೆ, ಮನಶ್ಯಾಂತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

ಆಡಳಿತಾಧಿಕಾರಿ, ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರ ನೇತೃತ್ಯದಲ್ಲಿ ನಡೆದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *

error: Content is protected !!