ಉಡುಪಿಯಲ್ಲಿ ಎನ್‌ಐಎ ಹಾಗೂ ಯುಎಪಿಎ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ಉಡುಪಿ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ (NIA) ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ದಾಖಲಾಗುವ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಉಡುಪಿಯಲ್ಲಿ ನೂತನವಾಗಿ “3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ”ವನ್ನು ಸ್ಥಾಪಿಸಲು ಕರ್ನಾಟಕ ಸರಕಾರವು ಮಂಜೂರಾತಿ ನೀಡಿ ಅಧಿಸೂಚನೆ ಹೊರಡಿಸಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ತಿಳಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯವು ಸುವೋ ಮೋಟೋ ರಿಟ್ ಅರ್ಜಿ (ಕ್ರಿಮಿನಲ್) ಸಂಖ್ಯೆ 1/2026 ರಲ್ಲಿ ಮಾ.24ರಂದು ನೀಡಿದ ನಿರ್ದೇಶನದನ್ವಯ, ಕರ್ನಾಟಕ ಉಚ್ಚ ನ್ಯಾಯಾಲಯದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರವು ಈ ಕ್ರಮ ಕೈಗೊಂಡಿದೆ.
ಉಡುಪಿಯಲ್ಲೇ ವಿಚಾರಣೆ: ಇದುವರೆಗೆ ಈ ಭಾಗದ ಎನ್‌ಐಎ ಹಾಗೂ ಯುಎಪಿಎ ಪ್ರಕರಣಗಳ ವಿಚಾರಣೆಗೆ ಸೂಕ್ತ ನ್ಯಾಯಾಲಯದ ಅಗತ್ಯವಿತ್ತು. ಇನ್ನು ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ದಾಖಲಾಗಿರುವ ಮತ್ತು ಮುಂಬರುವ ದಿನಗಳಲ್ಲಿ ದಾಖಲಾಗಲಿರುವ ಎಲ್ಲಾ NIA/UAPA ಪ್ರಕರಣಗಳ ವಿಚಾರಣೆಯು ಉಡುಪಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಈ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲೇ ನಡೆಯಲಿದೆ.
13 ಹುದ್ದೆಗಳ ಸೃಜನೆಗೆ ಮಂಜೂರಾತಿ:
ಸದ್ರಿ ವಿಶೇಷ ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆಗಾಗಿ ಒಬ್ಬರು ವಿಶೇಷ ನ್ಯಾಯಾಧೀಶರ ಹುದ್ದೆ ಸೇರಿದಂತೆ ಒಟ್ಟು 13 ವಿವಿಧ ಪೂರಕ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲು ಸಹ ಸರಕಾರವು ಮಂಜೂರಾತಿ ನೀಡಿದೆ ಎಂದು ವಕೀಲರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಈ ನೂತನ ವಿಶೇಷ ನ್ಯಾಯಾಲಯದ ಸ್ಥಾಪನೆಯಿಂದಾಗಿ ಗಂಭೀರ ಸ್ವರೂಪದ ಕಾನೂನು ಬಾಹಿರ ಚಟುವಟಿಕೆಗಳ ಪ್ರಕರಣಗಳ ಕಾನೂನು ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.





