NEET-UG ಮರು ಪರೀಕ್ಷೆ: ನಾಗ್ಪುರ ಮೂಲದ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ: NTAಯಿಂದ ಮತ್ತೆ ಲೋಪ

ಹೊಸದಿಲ್ಲಿ : NEET-UG ಮರು ಪರೀಕ್ಷೆಗೆ ಮೊದಲೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಕಡೆಯಿಂದ ಮತ್ತೆ ಲೋಪವಾಗಿರುವುದು ಕಂಡು ಬಂದಿದೆ. ರವಿವಾರ ಮರು ಪರೀಕ್ಷೆಗೆ ಹಾಜರಾಗಬೇಕಿದ್ದ ನಾಗ್ಪುರ ಮೂಲದ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಪರೀಕ್ಷಾ ಕೇಂದ್ರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಎಂದು ದಾಖಲಿಸಲಾಗಿದೆ.

ಈ ತಪ್ಪನ್ನು ವಿದ್ಯಾರ್ಥಿಯ ಪೋಷಕರು ಬಹಿರಂಗಪಡಿಸಿದ್ದು, ವಿದ್ಯಾರ್ಥಿಯ ಬಳಿ ಪಾಸ್‌ಪೋರ್ಟ್‌ ಕೂಡ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಟಿಎ, ತಾಂತ್ರಿಕ ದೋಷದಿಂದ ಈ ತಪ್ಪಾಗಿದೆ. ವಿದ್ಯಾರ್ಥಿಗೆ ಸ್ಥಳೀಯ ಪರೀಕ್ಷಾ ಕೇಂದ್ರದ ಹೊಸ ಪ್ರವೇಶ ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಈ ಹಿಂದೆ, ಮೇ 3ರಂದು ನಡೆದ ನೀಟ್ ಪರೀಕ್ಷೆ ವೇಳೆ ಇದೇ ವಿದ್ಯಾರ್ಥಿಗೆ ನಾಗ್ಪುರದ ಸರಸ್ವತಿ ವಿದ್ಯಾಲಯವನ್ನು ಪರೀಕ್ಷಾ ಕೇಂದ್ರವನ್ನಾಗಿ ನಿಗದಿಪಡಿಸಲಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಲಾಗಿತ್ತು. ಮರು ಪರೀಕ್ಷೆಗೆ ಪರೀಕ್ಷಾ ಕೇಂದ್ರವನ್ನು ತಿಳಿಯಲು ವಿದ್ಯಾರ್ಥಿಯು ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿದನು. ಅದರಲ್ಲಿ ʼಅಬುಧಾಬಿಯ ಇಂಡಿಯನ್ ಸ್ಕೂಲ್ʼ ಎಂದು ಬರೆಯಲಾಗಿತ್ತು.

ಕುಟುಂಬದ ಪ್ರಕಾರ, ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಯು ತನ್ನ ಮೊದಲ ಆಯ್ಕೆಯಾಗಿ ನಾಗ್ಪುರವನ್ನು ಆರಿಸಿಕೊಂಡಿದ್ದರು. ನಂತರ ವಾರ್ಧಾ ಮತ್ತು ಭಂಡಾರಾವನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

ಪ್ರವೇಶ ಪತ್ರದಲ್ಲಿ ವಿದೇಶಿ ಪರೀಕ್ಷಾ ಕೇಂದ್ರವನ್ನು ಉಲ್ಲೇಖಿಸಿರುವುದನ್ನು ನೋಡಿ ನಾವು ದಿಗ್ಭ್ರಮೆಗೊಂಡಿದ್ದೇವೆ. ನಮ್ಮ ಮಗುವನ್ನು ಪರೀಕ್ಷೆಗೆ ವಿದೇಶಕ್ಕೆ ಕಳುಹಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅವನ ಬಳಿ ಪಾಸ್‌ಪೋರ್ಟ್‌ ಕೂಡ ಇಲ್ಲ ಮತ್ತು ಪ್ರಯಾಣ ವ್ಯವಸ್ಥೆ ಮಾಡಲು ಸಾಕಷ್ಟು ಸಮಯವೂ ಇಲ್ಲ ಎಂದು ವಿದ್ಯಾರ್ಥಿಯ ತಂದೆ ಮುಹಮ್ಮದ್ ತಾಲಿಬ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕುಟುಂಬವು ಎನ್‌ಟಿಎ ಸಹಾಯವಾಣಿ ಮೂಲಕ ದೂರು ದಾಖಲಿಸಿದೆ, ಎನ್‌ಟಿಎ ತಪ್ಪನ್ನು ಒಪ್ಪಿಕೊಂಡಿದ್ದು, ಪರಿಷ್ಕೃತ ಪ್ರವೇಶ ಕಾರ್ಡ್ ನೀಡುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಮಾಜಿ ಶಿಕ್ಷಣ ಸಚಿವ ಅನೀಸ್ ಅಹ್ಮದ್ ಘಟನೆಯನ್ನು ಖಂಡಿಸಿದ್ದಾರೆ. ಇದು ಪರೀಕ್ಷಾ ಸಂಸ್ಥೆಯ ಗಂಭೀರ ಲೋಪ ಎಂದು ಹೇಳಿದ ಅವರು ವಿದ್ಯಾರ್ಥಿಗೆ ನಾಗ್ಪುರ ಅಥವಾ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!