ಐ.ಸಿ.ಡಿ.ಎಸ್‌ನ ನಿವೃತ್ತ ಪ್ರಬಂಧಕ ಐ.ಪ್ರಭಾಕರ್ ನಿಧನ

ಉಡುಪಿ: ಮಣಿಪಾಲದ ಐ.ಸಿ.ಡಿ.ಎಸ್‌ನ ಹಿರಿಯ ಪ್ರಬಂಧಕರಾಗಿದ್ದ ಐ. ಪ್ರಭಾಕರ್ (75) ಅವರು ಇಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎ. ಪದವಿಯಲ್ಲಿ ರ‍್ಯಾಂಕ್ ಪಡೆದಿದ್ದ ಅವರು, 1978 ರಿಂದ 1980ರವರೆಗೆ ಆಗಿನ ಕೇಂದ್ರ ಸಚಿವ ಹಾಗೂ ಮಣಿಪಾಲದ ಶಿಕ್ಷಣ ಕ್ರಾಂತಿಯ ಹರಿಕಾರರಾದ ಟಿ.ಎ. ಪೈ ಅವರ ಆಪ್ತ ಸ್ಟೆನೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಮಣಿಪಾಲದಲ್ಲಿ ಉನ್ನತ ಮಟ್ಟದ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಹಿರಿಯ ಶಿಕ್ಷಣ ತಜ್ಞ ಡಾ.ಶ್ರೀನಿವಾಸನ್ ರಾಮಸ್ವಾಮಿ ಅವರನ್ನು ನೇಮಿಸಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಯುವಕರಾಗಿದ್ದ ಪ್ರಭಾಕರ್ ಕಾರ್ಯನಿರ್ವಹಿಸಿದ್ದು, ಮುಂದೆ ಭಾರತದ ಪ್ರತಿಷ್ಠಿತ ನಿರ್ವಹಣಾ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಟ್ಯಾಪ್ಮಿ (TAPMI) ರೂಪುಗೊಳ್ಳುವ ಐತಿಹಾಸಿಕ ಪಯಣಕ್ಕೆ ಸಾಕ್ಷಿಯಾಗಿದ್ದರು.

ನಂತರ ಅವರು ಐ.ಸಿ.ಡಿ.ಎಸ್‌ನಲ್ಲಿ ಪ್ರಬಂಧಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ತಮ್ಮ ಪ್ರಾಮಾಣಿಕತೆ, ಕಾರ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳಿಂದ ಸಹೋದ್ಯೋಗಿಗಳ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಬಳಿಕ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು.

ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದೆ, ಉಡುಪಿಯ ಮಿತ್ರ ಆಸ್ಪತ್ರೆಯ ಆಡಳಿತ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಅನುಭವ ಮತ್ತು ಜ್ಞಾನವನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿದರು.

ಸರಳತೆ, ಸೌಜನ್ಯ, ನಿಷ್ಠೆ ಹಾಗೂ ಕರ್ತವ್ಯಪ್ರಜ್ಞೆಗೆ ಹೆಸರಾಗಿದ್ದ ಶ್ರೀ ಪ್ರಭಾಕರ್ ಅವರು ಎಲ್ಲರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡ ವ್ಯಕ್ತಿಯಾಗಿದ್ದರು.

ಅವರು ಪತ್ನಿ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಶ್ರೀಮತಿ ಪ್ರೇಮಾ ಪ್ರಭಾಕರ್, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!