ಮಾರಿಕೊಂಡ ಮಾಧ್ಯಮಗಳಿಗೆ ಹೇಳಿಕೆ ವಿಚಾರ: ಏನು ನಿಮ್ಮ ಪ್ರಾಬ್ಲಮ್? ಎಂದು ನಗು ಮುಖದಲ್ಲಿ ಉತ್ತರಿಸಿದ ಪ್ರಕಾಶ್ ರಾಜ್ !

ನನ್ನನ್ನು ತೇಜೋವಧೆ ಮಾಡುತ್ತಿರುವ ಮಾಧ್ಯಮಗಳನ್ನೇ ಗುರಿಯಾಗಿಸಿ ಇದನ್ನು ಹೇಳಿದ್ದೇನೆ”
ಬೆಂಗಳೂರು : ಸಾಮಾಜಿಕ‌ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾರಿಕೊಂಡ ಮಾಧ್ಯಮಗಳಿಗೆ ಆಹ್ವಾನ ಕುರಿತು ಬಹುಭಾಷಾ ನಟ ಚಿಂತಕ ಪ್ರಕಾಶ್ ರೈ ನಗು ಮುಖದಲ್ಲೇ ಉತ್ತರಿಸಿದ್ದಲ್ಲದೆ, ಏನ್ ನಿಮ್ ಪ್ರಾಬ್ಲಮ್ ಎಂದು ಪ್ರಶ್ನಿಸಿದರು.

ಧರ್ಮಸ್ಥಳ ವಿವಾದ ಪ್ರಕರಣದ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾರಿಕೊಂಡ ಮಾಧ್ಯಮಗಳಿಗೆ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು.

ಈ ವೇಳೆ ಕೆಲ ಮಾಧ್ಯಮ ಪ್ರತಿನಿಧಿಗಳು, ಮಾರಿಕೊಂಡ ಮಾಧ್ಯಮಗಳಿಗೆ ಆಹ್ವಾನ ವಿಚಾರಕ್ಕೆ ಏರು ಧ್ವನಿಯಲ್ಲಿ ಪ್ರಶ್ನಿಸಿದರೂ, ಪ್ರಕಾಶ್ ರಾಜ್, ನಗು‌ ಮುಖದಲ್ಲಿಯೇ ಉತ್ತರಿಸಿದರು.

ಬಳಿಕ ಸ್ಪಷ್ಟನೆ ನೀಡಿದ ಅವರು, ಮಾರಿಕೊಂಡ ಮಾಧ್ಯಮಗಳಿಗೆ ಆಹ್ವಾನ ಎನ್ನುವುದು ನನ್ನ ಲೇವಾಡಿ ಮಾತ್ರವಲ್ಲದೆ, ನನ್ನ ನೋವು ಆತಂಕವಾಗಿದೆ. ಹಲವಾರು ವರ್ಷಗಳಿಂದ ದೇಶದ ನಾನಾ ಭಾಷೆಯ ಮಾಧ್ಯಮಗಳನ್ನು ನೋಡಿದ್ದೇನೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಪತ್ರಿಕೋದ್ಯಮದಲ್ಲಿ ಸಾಕಷ್ಟು ಜನ ಗೆಳೆಯರಿದ್ದಾರೆ. ಅವರು ದೂರವಾಣಿ ಮೂಲಕ ನನ್ನೊಂದಿಗೆ ಮಾತನಾಡಿ ಸತ್ಯವನ್ನು ಬರೆಯಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ನಮ್ಮ ಅಸಹಾಯಕತೆ ಅರ್ಥಮಾಡಿಕೊಳ್ಳಿ ಎಂದು ಹೇಳಿಕೊಳ್ಳುತ್ತಾರೆ‌. ಇದು ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಅಲ್ಲದೆ ಪ್ರೆಸ್ ಕ್ಲಬ್ ಕಡೆಯಿಂದ ಕಳಿಸಿರುವ ಅಧಿಕೃತ ಆಹ್ವಾನದಲ್ಲಿ ಈ ಹೇಳಿಕೆ ಇಲ್ಲ. ಆದರೆ, ಧರ್ಮಸ್ಥಳ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶ ಪೂರಕವಾಗಿ ನನ್ನನ್ನು ತೇಜೋವಧೆ ಮಾಡುತ್ತಿರುವ ಮಾಧ್ಯಮಗಳನ್ನೇ ಗುರಿಯಾಗಿಸಿ ಇದನ್ನು ಹೇಳಿದ್ದೇನೆ ಹೊರತು ಬೇರೆ ಯಾವುದೇ ಅರ್ಥ ಬೇಕಿಲ್ಲ ಎಂದರು.

ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ತನಗೆ ಪ್ರಕಾಶ್ ರಾಜ್ ಕರೆ ಮಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳು ಎಂದು ಹೇಳಿದ್ದರು ಎಂದು ಆರೋಪ ಮಾಡಿದ್ದಾನೆ. ಹೀಗಾಗಿಯೇ, ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಪತ್ರಕರ್ತರು ಮಾರಿಕೊಂಡ ಮಾಧ್ಯಮಗಳು ಯಾರೆಂದು ಹೇಳಿ ಎಂದು ಪಟ್ಟು ಹಿಡಿದರು. ಆಗ, ಪ್ರಕಾಶ್ ರೈ ನಾನು ಅವರ ಹೆಸರು ಹೇಳಿದರೆ ಕೆಲಸ ಕಳೆದುಕೊಳ್ಳುತ್ತಾರೆ‌. ಅವರ ಅಸಹಾಯಕತೆ ನನಗೆ ಅರ್ಥ ಆಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!