ಶ್ರೀಕೃಷ್ಣ ಮಠದ ಪಾರ್ಕಿಂಗ್‌‌ನಲ್ಲಿ ಹೊಡೆದಾಟ: ಕೊಂಗ್ರಪಾಡಿಯ ವ್ಯಕ್ತಿಯ ಬಂಧನ

ಉಡುಪಿ, ಜೂನ್ 10: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದ ಬಳಿ ನಡೆದ ವಾಹನ ಸಂಚಾರದ ವಿಚಾರದಲ್ಲಿ ಉಂಟಾದ ವಾಗ್ವಾದವು ಪರಸ್ಪರ ಹಲ್ಲೆಗೆ ತಿರುಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಮತ್ತು ಕೌಂಟರ್ ಕೇಸ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಹೈದರಾಬಾದ್‌ನ ರವೀಂದ್ರ ನಗರದ ನಿವಾಸಿ ರಂಗ ರಾವ್ ಅವರು ಜೂನ್ 9ರಂದು ಕುಟುಂಬದೊಂದಿಗೆ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆ ಬಂದಿದ್ದ ವೇಳೆ, ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಸುಪ್ರೀತ್ ಕುಮಾರ್ ಚಲಾಯಿಸುತ್ತಿದ್ದ ಕಾರು ವೇಗವಾಗಿ ಬಂದಿತ್ತೆಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸುಪ್ರೀತ್ ಕುಮಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರಿನಲ್ಲಿದ್ದ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ರಂಗ ರಾವ್ ಅವರ ತಲೆಗೆ ಗಾಯವಾಗಿದ್ದು ರಕ್ತಸ್ರಾವ ಉಂಟಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 71/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಉಡುಪಿ ಕೊರಂಗ್ರಪಾಡಿಯ ನಿವಾಸಿ ಸುಪ್ರೀತ್ ಕುಮಾರ್ ಅವರು ನೀಡಿದ ಪ್ರತಿದೂರಿನಲ್ಲಿ, ರಾಜಾಂಗಣ ಪಾರ್ಕಿಂಗ್ ಸಮೀಪ ತಮ್ಮ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ತೆಲಂಗಾಣ ನೋಂದಣಿ ಸಂಖ್ಯೆಯ ಕಾರು ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆಯಲು ಯತ್ನಿಸಿತು ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಪ್ರಶ್ನಿಸಿದಾಗ ಎದುರಿನ ವಾಹನದಲ್ಲಿದ್ದವರು ಕಾರಿನಿಂದ ಇಳಿದು ಫೋಟೋ ಸ್ಟ್ಯಾಂಡ್, ಕುರ್ಚಿ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ನಡೆಸಿದ್ದು, ತಮ್ಮ ಪತ್ನಿಯ ಮೇಲೂ ಹಲ್ಲೆ ನಡೆಸಿ ಕಾರಿನ ಗಾಜುಗಳನ್ನು ಹಾನಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ಸುಪ್ರೀತ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ನಾಲಿಗೆಯಿಂದ ರಕ್ತಸ್ರಾವ ಉಂಟಾಗಿದೆ ಎಂದು ತಿಳಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 72/2026 ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಪೊಲೀಸರು ಈ ಎರಡೂ ಪ್ರಕರಣಗಳನ್ನು ಕೇಸ್ ಮತ್ತು ಕೌಂಟರ್ ಕೇಸ್ ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದು, ಒಂದು ಪ್ರಕರಣದ ಆರೋಪಿ ಸುಪ್ರೀತ್ ಕುಮಾರ್ (40) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!