ಗೋಹತ್ಯಾ ನಿಷೇಧಕ್ಕೆ ಕಾಂಗ್ರೆಸ್ ವಿರೋಧವಿಲ್ಲ- ಸರಕಾರದ ಕಣ್ಣೊರೆಸುವ ತಂತ್ರ: ಭಾಸ್ಕರ್ ರಾವ್
ಉಡುಪಿ: ಗೋಹತ್ಯಾ ನಿಷೇಧಕ್ಕೆ ಕಾಂಗ್ರೆಸ್ ಪಕ್ಷ ವಿರೋಧವಿಲ್ಲ. ಇದನ್ನು ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರೂ ಸ್ಟಷ್ಟಿಕರಿಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಮಾಡುವಾಗ ಚರ್ಚೆಗೆ ಆಸ್ಪದ ನೀಡದೆ ಏಕಾಏಕಿ ಜಾರಿಗೆ ತಂದಿರುವುದು ತಪ್ಪು.
ತಜ್ಞರೊಡನೆ ಚರ್ಚಿಸಿ ಸಾಧಕ-ಭಾದಕಗಳ ಚಿಂತನೆ ನಡೆಸದೆ ಭಾವನಾತ್ಮಕವಾಗಿ ಕಾಯ್ದೆ ಜಾರಿ ಮಾಡಿದ ವಿಧಾನಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ವೃದ್ಧ ಗೋವುಗಳ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಬಹುದೇ ಹೊರತು ವಾಸ್ತವ ಬಹಳ ಕಷ್ಟವಿದೆ. ಒಂದೇ ಸರಕಾರ ಸುಸಜ್ಜಿತ ಗೋಶಾಲೆಗಳನ್ನು ಸ್ಥಾಪಿಸಿ ಅಲ್ಲಿ ವೃದ್ಧ ಗೋವುಗಳ ಸಾಕುವ ವ್ಯವಸ್ಥೆ ಮಾಡಿ ಎಲ್ಲಾ ರೀತಿಯ ವಯಸ್ಸಿನ ಗೋಹತ್ಯೆ ನಿಷೇಧ ಮಾಡಿದರೆ ಮಾತ್ರ ಧರ್ಮ ಪಾಲನೆ ಮಾಡಿದಂತಾಗುವುದು.
ಗೋಹತ್ಯೆ ನಿಷೇಧ ಮಂಡನೆ ಹೆಸರಲ್ಲಿ ಸರಕಾರ ಜನರ ದಾರಿ ತಪ್ಪಿಸುತ್ತಿದೆ. ಗೋಹತ್ಯೆಯ ಅಪರಾಧಕ್ಕೆ ಈ ಹಿಂದೆ 3 ವರ್ಷದ ಜೈಲು ಶಿಕ್ಷೆ ಪ್ರಸ್ತಾಪವಿತ್ತು ಈಗ ಅದನ್ನು 7 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಕನಿಷ್ಠ ದಂಡವನ್ನು ಈ ಹಿಂದೆ ಇದ್ದ ರೂ. 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿದೆ. 13 ವರ್ಷ ತುಂಬಿದ ಗೋವುಗಳನ್ನು ವಧೆ ಮಾಡಬಹುದು ಹಾಗೂ ರೋಗದಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಅದರೊಂದಿಗೆ ಗೋರಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂಬ ಅಂಶವು ಪೋಲಿಸ್ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನವಲ್ಲವೇ ? ಕೇರಳ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೆ ಬಂದಿಲ್ಲ. ಕೇಂದ್ರವು ದೇಶಕ್ಕೆ ಒಂದೇ ನೀತಿಯನ್ನು ರೂಪಿಸಬೇಕಾಗಿದೆ.
ಗೋ ಹತ್ಯೆ ತಡೆಯುವ ನಿಜವಾದ ಇಚ್ಚಾಶಕ್ತಿ ಸರಕಾರಕ್ಕೆ ಇದ್ದಲ್ಲಿ ಗೋಮಾಂಸ ರಫ್ತಿಗೂ ನಿಷೇಧ ಹೇರಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.