ಭ್ರಷ್ಟಾಚಾರದ ಭದ್ರಕೋಟೆ ಒಡೆಯುತ್ತದೆ ಎಂಬ ಭಯದಿಂದ ನನ್ನನ್ನು ವಜಾ ಮಾಡಿರುತ್ತಾರೆ: ಸಂತೋಷ್ ಬೈರಂಪಳ್ಳಿ
ಉಡುಪಿ: ವಿಶ್ವ ಹಿಂದೂ ಪರಿಷತ್ತಿನ ತಮ್ಮ ಜವಾಬ್ದಾರಿಯಿಂದ ಮುಕ್ತಗೊಳಸಿರುವ ಕುರಿತು ವಿಶ್ವ ಹಿಂದೂ ಪರಿಷತ್ನ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳ್ಳಿ ಅವರು ಅಸಮಧಾನ ಹೊರಹಾಕಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನನ್ನ ಅಧಿಕಾರದ ಅವಧಿಯಲ್ಲಿ ಸಂಘಟನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಬೈರಂಪಳ್ಳಿ ಗ್ರಾಮ, ಶೀರೂರು ಗ್ರಾಮ ಮತ್ತು ಬೆಳ್ಳರ ಪಾಡಿ ಗ್ರಾಮದಲ್ಲಿ ಸುಮಾರು ಆರು ವಿಶ್ವ ಹಿಂದೂ ಪರಿಷತ್ ಘಟಕವನ್ನು ಸ್ಥಾಪನೆ ಮಾಡಿದ್ದೇನೆ. ಇದೀಗ, ವಿಶ್ವ ಹಿಂದೂ ಪರಿಷತ್ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು, ಏಕಾಏಕಿ ಕರೆ ಮಾಡಿ, ನೀವು ಸಂಘಟನೆಯಲ್ಲಿ ಇರುವಾಗ ಚುನಾವಣಾ ಹೇಳಿಕೆ ನೀಡಬಾರದು ಮತ್ತು ಅದರಿಂದ ಸಂಪೂರ್ಣ ಹಿಂದೆ ಬರಬೇಕು ಎಂದು ಹೇಳಿದ್ದರು. ಈ ವೇಳೆ ನಾನು, ನನ್ನ ನಿರ್ಧಾರ ನಮ್ಮ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಪರವಾಗಿ ಇರುತ್ತದೆ ಎಂದು ಹೇಳಿರುತ್ತೇನೆ. ಇದಾದನಂತರ ಅವರು, ನಿಮ್ಮನ್ನು ವಿಶ್ವ ಹಿಂದೂ ಪರಿಷತ್ನ ಜವಾಬ್ದಾರಿಯಿಂದ ನಾವು ಮುಕ್ತಗೊಳಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸಂತೋಷ್ ಅವರು ಹೇಳಿದರು. ಗ್ರಾಮ ಪಂಚಾಯತ್ ಚುನಾವಣೆ ಕೇವಲ ವ್ಯಕ್ತಿ ಆಧಾರಿತ ಚುನಾವಣೆ, ಇದರಲ್ಲಿ ಯಾವುದೇ ಪಕ್ಷಗಳು ಬರುವುದಿಲ್ಲ. ಆದರೆ ನಮ್ಮ ಬೈರಂಪಳ್ಳಿಯ ಕೆಲವು ನಾಯಕರು ಸೇರಿ ಸಂಘಟನೆಯನ್ನು ಮುರಿಯುವ ಉದ್ದೇಶದಿಂದ ಮತ್ತು ತಮ್ಮ ಭ್ರಷ್ಟಾಚಾರದ ಭದ್ರಕೋಟೆ ಒಡೆಯುತ್ತದೆ ಎಂಬ ಭಯದಿಂದ ರಾಜಕೀಯ ಪಕ್ಷದ ಜಿಲ್ಲಾ ಧುರೀಣರನ್ನು ಬಳಸಿಕೊಂಡು ನನ್ನನ್ನು ವಜಾ ಮಾಡಿರುತ್ತಾರೆ ಎಂದು ದೂರಿದ್ದಾರೆ. ಸಂಘಟನೆಯಲ್ಲಿ ರಾಜಕೀಯ ಪಕ್ಷ ಬರುವುದಿಲ್ಲ ಅಂತಾದರೆ ರಾಜಕೀಯ ಪಕ್ಷಗಳಿಂದ ಸಂಘಟನೆ ನಡೆಯಬೇಕೇ..? ಎಂದು ಪ್ರಶ್ನಿಸಿದ ಅವರು, ನಮ್ಮ ಉದ್ದೇಶ ಬೈರಂಪಳ್ಳಿ ಗ್ರಾಮ ಪಂಚಾಯತ್ನ್ನು ಭ್ರಷ್ಟಾಚಾರ ಮುಕ್ತ ಮಾಡುವುದು ಮತ್ತು ಸರ್ವತೋಮುಖ ಅಭಿವೃದ್ಧಿ. ಈ ಕಾರಣದಿಂದ 200 ಜನರ ಸ್ಥಾಯೀ ಸಮಿತಿ ಮತ್ತು 10 ಜನರ ಕೋರ್ ಕಮಿಟಿಯನ್ನು ರಚಿಸಿ ಪಕ್ಷ ರಹಿತವಾಗಿ ನಾನು ಹಾಗೂ ಯುವಕರ ತಂಡ ಸೇರಿ 13 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈ ಹೋರಾಟಕ್ಕಾಗಿ ನಾಂದಿ ಇಟ್ಟಿದ್ದೇವೆ. ಕಾರ್ಯಕರ್ತರೆಲ್ಲರೂ ಯಾವುದೇ ಗೊಂದಲಕ್ಕೆ ಒಳಗಾಗದೆ ಸಹಕರಿಸಬೇಕಾಗಿ ಈ ವೇಳೆ ಸಂತೋಷ್ ಮನವಿ ಮಾಡಿಕೊಂಡರು.ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಸುಖೇಶ್ ಪೂಜಾರಿ, ಶಿಲ್ಪಾ ರತ್ನಾವತಿ, ಪವಿತ್ರ ಪೂಜಾರಿ, ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು. |