ಕರಾವಳಿ ಜಿಲ್ಲೆಗಳಿಗೆ ಜೂ.5-11ರವರೆಗೆ ಆರೆಂಜ್ ಅಲರ್ಟ್
Oplus_0
ಉಡುಪಿ, ಜೂ.4: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಜೂ.5 ರಿಂದ 11ರವರೆಗೆ ಆರೆಂಜ್ ಅಲರ್ಟ್‌ನ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ನೀಡಿದೆ.
ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಮಳೆ,ಗಾಳಿ, ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೇ ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯಬೇಕು. ಕೃಷಿಕರು ಮಳೆ-ಸಿಡಿಲಿನ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಗಳಲ್ಲಿ ತೊಡಗಬಾರದು. ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ, ನೀರಿರುವ ಪ್ರದೇಶ, ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು.
ಮಕ್ಕಳು, ಸಾರ್ವಜನಿಕರು ಅಪಾಯಕಾರಿ ಮರ, ವಿದ್ಯುತ್‌ಕಂಬದ ಬಳಿ ಹೋಗಬಾರದು. ತುಂಡಾದ ವಿದ್ಯುತ್ ತಂತಿಯಿಂದ ದೂರವಿರಬೇಕು. ಅದೇ ರೀತಿ ದುರ್ಬಲವಾದ ಹಳೆಯ ಕಟ್ಟಡ, ಮರಗಳ ಬಳಿ, ಕೆಳಗೆ ನಿಲ್ಲಬಾರದು.
ಭಾರೀ ಮಳೆ ಸುರಿಯುವ ಸಂಭವವಿರುವುದರಿಂದ ಕೆಲವು ಕಡೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಜಾಗೃತೆ ವಹಿಸಬೇಕು. ಇಂತಹ ಪ್ರದೇಶಗಳ ಜನತೆ ತಹಶೀಲ್ದಾರ್ ಅಥವಾ ಗ್ರಾಪಂ ಕಚೇರಿಗಳನ್ನು ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್‌ಗೆ ಅಥವಾ ಆಯಾ ತಾಲೂಕು ತಹಶೀಲ್ದಾರ್ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೋಡೆಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು.
ತುರ್ತು ಸೇವೆಗೆ ಶುಲ್ಕ ರಹಿತ 1077 ಅಥವಾ ಕಂಟ್ರೋಲ್ ರೂಮ್‌ನ 0820-2574802 ಅಥವಾ ಆಯಾ ತಾಲೂಕು ಕೇಂದ್ರಗಳ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಗುರುವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 6.9ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 9.3, ಕಾಪು 8.1, ಕಾರ್ಕಳ 7.1, ಹೆಬ್ರಿ 6.9, ಉಡುಪಿ 5.9, ಬ್ರಹ್ಮಾವರ 5.8 ಹಾಗೂ ಬೈಂದೂರು 3.6ಮಿ.ಮೀ. ಮಳೆಯಾದ ವರದಿ ಬಂದಿವೆ.





