ಹೆಬ್ರಿ: 60 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು
ಹೆಬ್ರಿ: ಹೆಬ್ರಿಯ ಅನಂತನಗರ ಕೀರ್ತನ್ ಪ್ರಭು ಅವರ ಮನೆಯಿಂದ ಚಿನ್ನಾಭರಣ ಕಳ್ಳತನವಾದ ಘಟನೆಯ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮಿಜಾರು ಎಂಬಲ್ಲಿ ಕಳ್ಳರನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ತಮಿಳುನಾಡು ಮೂಲದ ಕೇರಳದಲ್ಲಿ ವಾಸವಾಗಿರುವ ಸಲೀಂ, ಮೂಡುಬಿದಿರೆ ಹರೀಶ್ ಶೆಟ್ಟಿ, ಕೇರಳದ ಸಫಾದ್ ಬಂಧಿತರು. ಅವರಿಂದ ಚಿನ್ನ ಬೆಳ್ಳಿ ಆಭರಣ ಹಾಗೂ ಹವಳವನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮಾರ್ಗದರ್ಶನದಲ್ಲಿ ಪೊಲೀಸ್ ಹೆಚ್ಚುವರಿ ಅಧಿಕ್ಷಕ ಸುಧಾಕರ ಎಸ್ ನಾಯಕ್ ಅವರ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ಎಸ್ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ, ಕಾರ್ಕಳ ಸಿ. ಪಿ. ಐ ಗಳಾದ ಮಂಜಪ್ಪ ಡಿ.ಆರ್,ರಾಘವೇಂದ್ರ, ಹೆಬ್ರಿ ಪಿಎಸ್ಐಗಳಾದ ರವಿ ಬಿ ಕೆ ಮತ್ತು ಚಂದ್ರ ಏ ಕೆ, ಕಾರ್ಕಳದ ಪಿಎಸ್ಐಗಳಾದ ಪ್ರಸನ್ನ ಎಂ ಎಸ್, ಶಿರ್ವದ ಪಿಎಸ್ಐ ಮಂಜುನಾಥ ಮರಬದ, ಪಡುಬಿದ್ರಿಯ ಎಎಸ್ಐ ರಾಜೇಶ್ ಪಿ, ಕಾರ್ಕಳದ ಸಿಬ್ಬಂದಿಗಳಾದ ರಂಜಿತ್, ಸಂತೋಷ ಒಳಗೊಂಡ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಿ ತಮಿಳುನಾಡು ಚೆನ್ನೈ ಪೆರೂರು ಮೂಲದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚರ್ಕಳ ಮುಟ್ಟತ್ತೋಡಿ ಚೆರಿಯಾಲಂಬಾಡಿ ವಾಸಿ ಕಾಸರಗೋಡು ರಮ್ದೀನ್ ಸಲೀಂ, ಮೂಡಬಿದ್ರೆಯ ಮಿಜಾರು ಗ್ರಾಮದ ಹರೀಶ್ ಶೆಟ್ಟಿ ಮತ್ತು ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಮಹಮ್ಮದ್ ಸಫ್ವಾನ್ ಎಂಬವರನ್ನು ದಸ್ತಗಿರಿ ಮಾಡಿ ಕಳವಾದ 37,87,800ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಹಾಗೂ 4 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.





