ಕದ್ದ ಮೊಬೈಲ್ ಮಾರಾಟ ಯತ್ನ- ಉಡುಪಿ ಪೊಲೀಸರಿಗೆ 7 ಫೋನ್ ಹಸ್ತಾಂತರ
ಉಡುಪಿ, ಮೇ 27: ಉಡುಪಿ ಜಿಲ್ಲೆಯ ವಿವಿಧ ಮೊಬೈಲ್ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲು ಬಂದ ಸಂದರ್ಭ, ಅಂಗಡಿ ಮಾಲಕರು ಎಚ್ಚರಿಕೆಯಿಂದ ವರ್ತಿಸಿ ಸಂಚಾರ್ ಸಾಥಿ ಆಪ್ ಮೂಲಕ ಮೊಬೈಲ್‌ಗಳನ್ನು ಪರಿಶೀಲಿಸಿದ ವೇಳೆ ಅವುಗಳು ಬ್ಲಾಕ್ ಲಿಸ್ಟ್‌ನಲ್ಲಿ ಇರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಮೊಬೈಲ್‌ಗಳ ಸೂಕ್ತ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳನ್ನು ನೀಡದೇ ಇರುವುದರಿಂದ ಅನುಮಾನ ವ್ಯಕ್ತಗೊಂಡಿದ್ದು, ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಹಾಗೂ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್, ಸುದರ್ಶನ್, ಗಣೇಶ್ ಮತ್ತು ಅಭಿಷೇಕ್ ಅವರು ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ಲಕ್ಷಾಂತರ ರೂ. ಮೌಲ್ಯದ 7ಮೊಬೈಲ್ ಫೋನ್‌ಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಸ್ತಾಂತರಿಸಿದ್ಲಾರೆ.ಈ ಮೂಲಕ ಮೊಬೈಲ್‌ಗಳ ಮೂಲ ವಾರಸುದಾರರನ್ನು ಪತ್ತೆಹಚ್ಚಿ, ಕಾನೂನು ಕ್ರಮದಂತೆ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಲಾಗಿದ್ದು, ಅಪರಿಚಿತ ವ್ಯಕ್ತಿಗಳು ಮೊಬೈಲ್ ಮಾರಾಟಕ್ಕೆ ಬಂದಲ್ಲಿ ಮೊದಲು ಸಂಚಾರ್ ಸಾಥಿ ಆಪ್‌ನಲ್ಲಿ ಪರಿಶೀಲನೆ ಮಾಡಬೇಕು. ಮೊಬೈಲ್ ಪರಿಶೀಲನೆಗಾಗಿ ಅಂಗಡಿ ಮಾಲೀಕರು ತಮ್ಮ ಸ್ವಂತ SIM ಕಾರ್ಡ್ ಬಳಸದೇ, ಮೊಬೈಲ್ ನೀಡಿದ ಗ್ರಾಹಕರ SIM ಕಾರ್ಡ್‌ನನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಹಾಗೆಯೇ ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳನ್ನು ಖರೀದಿಸುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸಬೇಕು. ಯಾವುದೇ ಅನುಮಾನಾಸ್ಪದ ಮಾಹಿತಿ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಮೊಬೈಲ್ ಮಾರಾಟಕ್ಕೆ ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.





