ವಿದ್ಯುತ್ ಬಾಕಿ ಮತ್ತು ಕನಿಷ್ಠ ವೇತನ ಏರಿಕೆ ವಿರೋಧಿಸಿ ಸಣ್ಣ ಕೈಗಾರಿಕಾ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ, ಮೇ 27: ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಎರಡು ಪ್ರಮುಖ ತಕರಾರು ಪತ್ರಗಳನ್ನು ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎಂ. ವಸಂತ್ ಕಿಣಿ ನೇತೃತ್ವದಲ್ಲಿ ಸಲ್ಲಿಸಲಾದ ಮೊದಲ ಮನವಿಯಲ್ಲಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದ ಅನ್ವಯ ಮೆಸ್ಕಾಂ ಸಂಸ್ಥೆ 2025-26ನೇ ಸಾಲಿನ ಬಾಕಿ ಹಣವನ್ನು ಕೈಗಾರಿಕೆಗಳಿಗೆ ವಿಧಿಸಿರುವ ಕ್ರಮವನ್ನು ವಿರೋಧಿಸಲಾಯಿತು.

ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರದಿಂದ ನೀಡಬೇಕಿದ್ದ ಸಹಾಯಧನ ಬಿಡುಗಡೆ ಆಗದೇ ಉಳಿದ ಹಿನ್ನೆಲೆ, ಅದರ ಹೊರೆ ಕೈಗಾರಿಕೆಗಳು ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಹಾಕಲಾಗಿದೆ. ಇದು ಕೈಗಾರಿಕೆಗಳ ಮೇಲೆ ಮಾಡಿದ ಅನ್ಯಾಯವಾಗಿದ್ದು, ಹಿಂಬಾಕಿ ಹಣ ವಸೂಲಿಯನ್ನು ತಕ್ಷಣ ಹಿಂಪಡೆದು, ಕೇವಲ ಬಳಕೆಯಾದ ವಿದ್ಯುತ್ ದರವನ್ನು ಮಾತ್ರ ವಸೂಲಿ ಮಾಡುವಂತೆ ಮೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇನ್ನೊಂದು ಮನವಿಯಲ್ಲಿ ಕನಿಷ್ಠ ವೇತನವನ್ನು ಏಕಾಏಕಿ 60 ಶೇಕಡಾ ಹೆಚ್ಚಿಸಿರುವ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲಾಯಿತು. ಈಗಾಗಲೇ ಯುದ್ಧ ಪರಿಸ್ಥಿತಿ, ಡೀಸೆಲ್ ಬೆಲೆ ಏರಿಕೆ, ಸಾಗಾಟ ವೆಚ್ಚ ಹಾಗೂ ಕಚ್ಚಾವಸ್ತುಗಳ ಕೊರತೆಯಿಂದ ಎಂಎಸ್‌ಎಂಇ ವಲಯದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿದ್ದು, ಈ ಹೆಚ್ಚುವರಿ ವೇತನ ಭಾರದಿಂದ ಅನೇಕ ಸಣ್ಣ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ತರಬೇತಿ ಕೇಂದ್ರಗಳಂತಿದ್ದು, ಕನಿಷ್ಠ ವೇತನದ ಏರಿಕೆಯಿಂದ ಹೊಸ ನೇಮಕಾತಿ ಕಡಿಮೆಯಾದರೆ ನಿರುದ್ಯೋಗ ಪ್ರಮಾಣವೂ ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಎಂಎಸ್‌ಎಂಇ ವಲಯದ ಕೈಗಾರಿಕೆಗಳ ನೆರವಿಗೆ ಬರಬೇಕೆಂದು ಸಂಘ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!