ಸಿದ್ದರಾಮಯ್ಯ ನಾಳೆ(ಮೇ28) ರಾಜೀನಾಮೆ ಸಾಧ್ಯತೆ?-ನೂತನ ಸಿಎಂ ಡಿಕೆಶಿ, 4 ಡಿಸಿಎಂ?- ಯಾರಿಗೆಲ್ಲಾ ಅವಕಾಶ…?

ಬೆಂಗಳೂರು: ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆಯಾಗಲಿದ್ದು, 4 ಮಂದಿ ಡಿಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದು‌ ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಮಂಗಳವಾರ ನಡೆಸಲಾದ ಸರಣಿ ಸಭೆಗಳಲ್ಲಿಕರ್ನಾಟಕದ ನಾಯಕತ್ವದ ಸಂಘರ್ಷಕ್ಕೆ ಪರಿಹಾರ ಸೂತ್ರವನ್ನು ಹೈಕಮಾಂಡ್‌ ರಚಿಸಿದೆ. ಈ ಕುರಿತು ಸಿಎಂ ಹಾಗೂ ಡಿಸಿಎಂಗೂ ಮಾಹಿತಿ ನೀಡಿದೆ.

ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕರೆಸಿಕೊಂಡು, ರಾಜ್ಯ ನಾಯಕತ್ವವನ್ನು ಬದಲಾಯಿಸುವ ರಾಹುಲ್ ಗಾಂಧಿ ಅವರ ಮಾತಿಗೆ ಸಿದ್ದರಾಮಯ್ಯ ಭಾಗಶಃ ಒಪ್ಪಿದ್ದು, ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಸಿದ್ದರಾಮಯ್ಯ ನಾಯಕತ್ವವನ್ನು ಗೌರವಯುತವಾಗಿಯೇ ಬದಲಾಯಿಸಲು ಎಲ್ಲವ್ಯವಸ್ಥೆ ಮಾಡಿಕೊಂಡಿದೆ.

ಡಿಕೆ ಶಿವಕುಮಾರ್ ಬಿಟ್ಟರೆ ಸಿಎಂ ಸ್ಥಾನಕ್ಕೆ ಪ್ರಮುಖ ಹೆಸರು ಯಾರದ್ದು?

ಸಿಎಂ ಸ್ಥಾನಕ್ಕೆ ಕಳೆದ 3 ವರ್ಷದಿಂದ ಹೋರಾಟ ನಡೆಸುತ್ತಿರುವ ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅವರನ್ನು ಬಿಟ್ಟರೆ ಡಾ. ಜಿ ಪರಮೇಶ್ವರ್ ಅವರು ಹೆಸರು ಕೇಳಿ ಬರುತ್ತಿದೆ. ಇನ್ನೂ ಕಾಂಗ್ರೆಸ್‌ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಕೊಟ್ಟು ಗೌರವ ಸಲ್ಲಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸುತ್ತಿದೆ.

ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸು ವುದಿದ್ದರೆ ಅದಕ್ಕಾಗಿ ದಿನ ಪೂರ್ತಿ ಸಭೆ ನಡೆಸುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಅಕ್ಕಪಕ್ಕ ಕೂರಿಸಿಕೊಂಡು ಹೈಕಮಾಂಡ್‌ ಪ್ರತಿನಿಧಿಗಳು ಮಾತುಕತೆ ನಡೆಸಿಯೇ ಇಲ್ಲ. ಉಭಯರೊಂದಿಗೂ ಪ್ರತ್ಯೇಕವಾಗಿ ಸಮಲೋಚನೆ ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆಗೆ ಹೆಚ್ಚು ಸಮಯ ಮೀಸಲಿಡಲಾಗಿತ್ತು. ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಒಂದು ತಾಸಿಗೂ ಹೆಚ್ಚು ಹೊತ್ತು ಸಿಎಂರೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿಯಿದೆ. ಅಚ್ಚರಿಯೆಂದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ರಾಹುಲ್‌ ಪ್ರತ್ಯೇಕ ಭೇಟಿ ಮಾಡಿಯೇ ಇಲ್ಲ. ವೇಣುಗೋಪಾಲ್‌ ಸಹಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಡಿಸಿಎಂರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಸಿದ್ದರಾಮಯ್ಯ ಅವರು ಮೇ 28ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ತಿಳಿದುಬಂದಿದೆ. ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಏತನ್ಮಧ್ಯೆ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿ ಮುಂದಿನ ಬೆಳವಣಿಗೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಡಿಕೆಶಿಗೆ ಸಿಎಂ ಪಟ್ಟ..?

ಪ್ರಸ್ತುತ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿದ್ದಾರೆ.

ಸಂಘಟನಾ ಸಾಮರ್ಥ್ಯ, ಪಕ್ಷದ ಸಂಕಷ್ಟದ ಸಮಯದಲ್ಲಿ ವಹಿಸಿದ ಪಾತ್ರ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಎಂಬ ಕಾರಣಗಳಿಂದ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಅಂತಿಮ ಘೋಷಣೆ ಹೊರಬರುವವರೆಗೆ ಯಾವುದೇ ಹೆಸರು ಖಚಿತವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!