ಮೇ 31: ಕಿದಿಯೂರು ಮಧುಶ್ರೀ ಪ್ರಕಾಶನದ 40ರ ಸಂಭ್ರಮ

ಉಡುಪಿ, ಮೇ 27: ತುಳುಕೂಟ ಉಡುಪಿ ಮತ್ತು ಉಡುಪಿಯ ವಿಶ್ವಪ್ರಭ ಪ್ರತಿಷ್ಠಾನದ ಜಂಟಿ ಸಹಯೋಗದಲ್ಲಿ ಉಡುಪಿಯ ಪ್ರಸಿದ್ದ ಪ್ರಕಾಶನ ಸಂಸ್ಥೆಯಾದ ಮಧುಶ್ರೀ ಪ್ರಕಾಶನ ಕಿದಿಯೂರು ಇದರ ನಲ್ವತ್ತನೇ ವರ್ಷದ ಸಂಭ್ರಮವನ್ನು ಇದೇ ಮೇ 31ರಂದು ರವಿವಾರ ಉಡುಪಿ ಕಿದಿಯೂರು ಹೋಟೇಲಿನ ಅನಂತಶಯನ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು 40 ವರ್ಷಗಳ ಹಿಂದೆ ಪ್ರಾರಂಭಿಸಿದ ಮಧುಶ್ರೀ ಪ್ರಕಾಶನ ಹಲವು ತುಳು ಪುಸ್ತಕಗಳು ಸೇರಿದಂತೆ 40 ಪುಸ್ತಕಗಳನ್ನು ಪ್ರಕಟಿಸಿದೆ ಎಂದರು.

ಮೇ 31ರ ರವಿವಾರ ಅಪರಾಹ್ನ 3:30 ನಡೆಯುವ 40ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಎರಡು ಪ್ರಮುಖ ಕೃತಿ ಬಿಡುಗಡೆಗೊಳ್ಳಲಿದೆ. ನಿವೃತ್ತ ಉಪಪ್ರಾಂಶುಪಾಲರಾದ ಎಸ್.ಎನ್.ಡಿ.ಪೂಜಾರಿ ಇವರ ‘ತುಳುವ ದೈವ ಸಂಪ್ರದಾಯ’ ಅಧ್ಯಯನ ಗ್ರಂಥ ಹಾಗೂ ಗಂಗಾಧರ ಕಿದಿಯೂರು ಅವರ ‘ಪಿಂಗಾರದ ಬಾಲೆ ಸಿರಿ’ ತುಳು ನಾಟಕದ ಇಂಗ್ಲೀಷ್ ಆವೃತ್ತಿ ಅಂದು ಬಿಡುಗಡೆಗೊಳ್ಳುವ ಕೃತಿಗಳಾಗಿವೆ.

ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಹಾಗೂ ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮಿನ್ ಸಂಕಮಾರ್ ಅವರು ಬಿಡುಗಡೆ ಮಾಡಲಿರುವರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಮತ್ತು ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಕೃತಿಗಳ ಪರಿಚಯ ಮಾಡಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಹಿರಿಯ ಉದ್ಯಮಿ ಯು.ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ. ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ನಿವೃತ್ತ ಶಿಕ್ಷಕರಾದ ಸರಳಾ ಶೆಟ್ಟಿ, ಧನಲಕ್ಷ್ಮೀ, ಮುತ್ತಕ್ಕ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಪಿತ್ರೋಡಿ, ಸಂಹಿತಾ ಜಿ. ಪಿ., ಯಶಸ್ ಪಿ.ಸುವರ್ಣ ಕಟಪಾಡಿ, ಶಾರ್ವರಿ ಯು. ಅಂಚನ್, ಆದ್ಯ ಶ್ರೀನಾಥ್, ಅದಿತಿ ಶ್ರೀನಾಥ್, ಸಮರ್ಥ ಎಂ. ಸಿ, ತನ್ವಿ ಎಂ. ಕಿದಿಯೂರು, ವೈಷ್ಣವಿ ವಿಶ್ವನಾಥ್ ಅವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಜಯಕರ ಇಂದ್ರಾಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಧುಶ್ರೀ ಪ್ರಕಾಶಕ್ಕೆ ಬೆನ್ನೆಲುಬಾಗಿ ನಿಂತಿರುವ ಸಂಘ ಸಂಸ್ಥೆಗಳಾದ ರಂಗಭೂಮಿ ಉಡುಪಿ, ಸುಮನಸಾ ಕೊಡವೂರು, ಕಲಾಕಿರಣ್ ಕ್ಲಬ್ ಬೈಲೂರು, ನವಸುಮ ರಂಗಮಂಚ ಕೊಡವೂರು, ಯೂತ್ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಕ್ಲಬ್ ಅಂಬಲಪಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಠೋಬ ಭಜನಾ ಮಂದಿರ ಅಂಬಲಪಾಡಿ, ತುಳುಕೂಟ ಉಡುಪಿ, ನಂದಗೋಕುಲ ಯುವಕ ಮಂಡಲ ಮಾರ್ಪಳ್ಳಿ, ಬೈದಶ್ರೀ ಸಂಶೋಧನಾ ಕೇಂದ್ರ ಆದಿ ಉಡುಪಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉಡುಪಿ, ಸಂಚಾಲಕರಾದ ಬಿ. ಪ್ರಭಾಕರ ಭಂಡಾರಿ ಮತ್ತು ಪ್ರಕಾಶ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!