ಕೊಲ್ಲೂರು ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ
ಉಡುಪಿ: ಬೈಂದೂರು ತಾಲೂಕು ಕೊಲ್ಲೂರು ಗ್ರಾಮ ವ್ಯಾಪ್ತಿಯ ದಳಿ ಎಂಬಲ್ಲಿ ಮೇ 17ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತಪಟ್ಟ ಮಹಿಳೆಯೊಬ್ಬರ ಮೈಮೇಲಿನ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಬಳಿಕ ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿರುವ ಬಗ್ಗೆ ಶ್ರೀಕುಮಾರ ಎಂಬವರು ನೀಡಿದ ದೂರಿನ ಮೇರೆಗೆ ಅಪರಾಧ ಕ್ರಮಾಂಕ 38/2026 ಕಲಂ 303(2) BNS ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿತು.
ಸಿಸಿಟಿವಿ ದೃಶ್ಯಗಳು, ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದ ಫೋಟೋಗಳು ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಯಾದ ಹೇಮಂತ (40), ತಂದೆ ನರಸಿಂಹ ಶೆಟ್ಟಿ, ಕಲ್ಯಾಣಿಗುಡ್ಡೆ ನಿವಾಸಿ, ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 3.910 ಗ್ರಾಂ ತೂಕದ ಉಂಗುರ (ಅಂದಾಜು ಮೌಲ್ಯ ₹57 ಸಾವಿರ), 3.450 ಗ್ರಾಂ ತೂಕದ ಬಳೆ (₹50 ಸಾವಿರ) ಹಾಗೂ 7.160 ಗ್ರಾಂ ತೂಕದ ಸರ (₹1 ಲಕ್ಷ) ಸೇರಿದಂತೆ ಒಟ್ಟು ಸುಮಾರು ₹2.07 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯಲ್ಲಿ ನಾಗೇಂದ್ರ ಹೆಚ್‌ಸಿ, ಲಕ್ಷ್ಮಣ ಗಾಣಿಗ ಹೆಚ್‌ಸಿ, ರಾಘವೇಂದ್ರ ಹೆಚ್‌ಸಿ ಹಾಗೂ ನಾಗರಾಜ ಪಿಸಿ ಪಾಲ್ಗೊಂಡಿದ್ದರು.





