ಮೇ 20ರಂದು ಉಡುಪಿ ಜಿಲ್ಲೆಯ ಎಲ್ಲಾ ಔಷಧಿ ಮಾರಾಟ ಅಂಗಡಿಗಳು ಬಂದ್

ಉಡುಪಿ: ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ (AIOCD) ನಿರ್ದೇಶನದಂತೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘವು (UDCDA) ಮೇ 20ರಂದು ಉಡುಪಿ ಜಿಲ್ಲೆಯಾದ್ಯಂತ ಫಾರ್ಮಸಿ ಬಂದ್ ಮಾಡುವುದರ ಮೂಲಕ ತನ್ನ ಬೆಂಬಲವನ್ನು ಸೂಚಿಸಿದೆ. ಅದರಂತೆ ಈ ಬಂದ್ ಮೇ 19 ರಾತ್ರಿ 12 ಗಂಟೆಯಿಂದ ಮೇ 20 ರಾತ್ರಿ 12 ಗಂಟೆಯ ವರೆಗೆ ನಡೆಯಲಿದೆ .

ಈ ಬಂದ್ ಉಡುಪಿ ಜಿಲ್ಲಾ ಹೋಲ್ ಸೇಲ್ ವ್ಯಾಪಾರಸ್ಥರು ಹಾಗೂ ಸರ್ಜಿಕಲ್ ವ್ಯಾಪಾರಸ್ಥರು ತಮ್ಮ ಸಂಸ್ಥೆಗಳನ್ನು ಬಂದು ಮಾಡುವ ಮೂಲಕ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ.

ಔಷಧಿ ವ್ಯಾಪಾರ ಕ್ಷೇತ್ರದ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯುವುದು ಸಂಘಟನೆಯ ಉದ್ದೇಶವಾಗಿದೆ.

ಈ ರಾಷ್ಟ್ರವ್ಯಾಪಿ ಹೋರಾಟದ ಪ್ರಮುಖ ಕಾರಣವೆಂದರೆ ಇ-ಫಾರ್ಮಸಿಗಳ ನಿಯಂತ್ರಣರಹಿತ ವಿಸ್ತರಣೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಅತಿಯಾದ ಡಿಸ್ಕೌಂಟ್ ನೀತಿ. AIOCD ಪ್ರಕಾರ, ಇಂತಹ ಡಿಜಿಟಲ್ ವೇದಿಕೆಗಳ ನಿಯಂತ್ರಣರಹಿತ ಚಟುವಟಿಕೆಗಳಿಂದ ದೇಶದ ಸುಮಾರು 5 ಕೋಟಿ ಜನರ ಜೀವನೋಪಾಯಕ್ಕೆ ಅಪಾಯ ಉಂಟಾಗಿದೆ. ಸಂಘಟನೆಯ ಅಭಿಪ್ರಾಯದಂತೆ, ಈ ಪರಿಸ್ಥಿತಿ ಸಾಂಪ್ರದಾಯಿಕ ಸ್ವತಂತ್ರ ಔಷಧಿ ಅಂಗಡಿಗಳ ಅಸ್ತಿತ್ವವನ್ನೇ ಸಂಕಷ್ಟಕ್ಕೆ ತಳ್ಳುತ್ತಿದೆ. ಗ್ರಾಮೀಣ ಹಾಗೂ ಅರ್ಧನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಪ್ರಮುಖ ಆಧಾರವಾಗಿರುವ ಚಿಲ್ಲರೆ ಔಷಧಿ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

AIOCD ಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ ಕೋವಿಡ್ -19 ಅವಧಿಯಲ್ಲಿ ಹೊರಡಿಸಲಾದ G.S.R. 220(E) ಅಧಿಸೂಚನೆಯನ್ನು ತಕ್ಷಣ ಹಿಂಪಡೆಯುವುದು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಾತ್ಕಾಲಿಕ ಕ್ರಮವಾಗಿ ಜಾರಿಗೊಂಡಿದ್ದ ಈ ನಿಯಮವನ್ನು ಇಂದಿಗೂ ಮುಂದುವರಿಸಲಾಗುತ್ತಿದೆ ಎಂದು ಸಂಘಟನೆ ಆಕ್ಷೇಪಿಸಿದೆ.

ಸಂಘಟನೆಯ ಪ್ರಕಾರ, ಕೆಲವು ಡಿಜಿಟಲ್ ವೇದಿಕೆಗಳು Rule 65 ಅಡಿಯಲ್ಲಿ ಕಡ್ಡಾಯವಾಗಿರುವ ಮೂಲ ವೈದ್ಯರ ಚೀಟಿ ಪರಿಶೀಲನೆ ಮತ್ತು ಮುದ್ರಣ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು AIOCD ಎಚ್ಚರಿಸಿದೆ.

ಇದಲ್ಲದೆ, AI ಆಧಾರಿತ ನಕಲಿ ವೈದ್ಯರ ಚೀಟಿಗಳ ಮೂಲಕ ಆಂಟಿಬಯಾಟಿಕ್ ಔಷಧಿಗಳ ದುರುಪಯೋಗ ಹೆಚ್ಚುತ್ತಿದ್ದು, ಇದು ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ಸಮಸ್ಯೆಯನ್ನು ಗಂಭೀರಗೊಳಿಸುತ್ತಿದೆ ಎಂದು ಸಂಘಟನೆ ಹೇಳಿದೆ. ಔಷಧ ಮಾರಾಟದಲ್ಲಿ ಫಾರ್ಮಸಿಸ್ಟ್ ಮತ್ತು ರೋಗಿಯ ನೇರ ಸಂಪರ್ಕ ಇಲ್ಲದಿರುವುದು ರೋಗಿಗಳ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಧಾನಮಂತ್ರಿಗಳ ಕಚೇರಿಗೆ ಸಲ್ಲಿಸಿದ ಮನವಿಯಲ್ಲಿ, AIOCD ಇ-ಫಾರ್ಮಸಿ ಸಂಬಂಧಿತ G.S.R. 817(E) ಅಧಿಸೂಚನೆಯ ನ್ನು ಕೂಡ ಹಿಂಪಡೆಯುವಂತೆ ಒತ್ತಾಯಿಸಿದೆ. ಜೊತೆಗೆ ಕಾರ್ಪೊರೇಟ್ ಚೈನ್ ಸಂಸ್ಥೆಗಳ ಅತಿಯಾದ ಡಿಸ್ಕೌಂಟ್ ನಿಯಂತ್ರಣಕ್ಕೆ “Level Playing Field” ನೀತಿ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ.

ಕೇಂದ್ರ ಆರೋಗ್ಯ ಮತ್ತು ವಾಣಿಜ್ಯ ಸಚಿವಾಲಯಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಬಂದ್ ಘೋಷಿಸಲಾಗಿದೆಂದು ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಅಧ್ಯಕ್ಷರಾದ ಅಮ್ಮುಂಜೆ ರಮೇಶ್ ನಾಯಕ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್ ವತಿಯಿಂದ ಮೇ 20ರಂದು ಎಲ್ಲಾ ಔಷಧಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘದ ನಿರ್ದೇಶನದಂತೆ ಉಡುಪಿ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ಅವರ ನೇತೃತ್ವದಲ್ಲಿ ಶಂಕರ ನಾಯಕ ಸಹಾಯಕ ಔಷಧ ನಿಯಂತ್ರಕರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಯು ಸುಬ್ರಹ್ಮಣ್ಯ ರಾವ್, ಕೋಶಾಧಿಕಾರಿ ಗುರುಕೃಪಾ ವಿ ರಾವ್, ರವೀಂದ್ರ ಶೆಟ್ಟಿ, ನಂದಕುಮಾರ್, ಮಂಜುನಾಥ್ ನಾಯಕ್, ಅಶ್ವಿನ್, ಹಾಗೂ ರಾಜೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!