ಉಡುಪಿ:ದಲಿತ ಮುಖಂಡನಿಗೆ ಮೇಲೆ ಹಲ್ಲೆ- ಚಿಕಿತ್ಸೆ ನಿರಾಕರಿಸಿದ ವೈದ್ಯರ ವಿರುದ್ಧ ಆಕ್ರೋಶ

ಉಡುಪಿ: ನಗರದ ನಿಟ್ಟೂರು ಸಮೀಪದ ಕೊಡಂಕೂರು ತಿರುವಿನ ಬಳಿ ಶನಿವಾರ ರಾತ್ರಿ ದಲಿತ ಮುಖಂಡ ಮುರಳಿಯವರ ಮೇಲೆ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದರೆಂದು ಆರೋಪಿಸಲಾದ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯ ಗುರುದತ್ತ್ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಿ ವಜಾಗೊಳಿಸುವಂತೆ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಹಾಗೂ ಮುಖಂಡ ಹರೀಶ್ ಸಲ್ಯಾನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅನಾಮಿಕರು ಬಾಲಕನೊಬ್ಬನಿಗೆ ಕಾರಿನೊಳಗೆ ಹಲ್ಲೆ ನಡೆಸುತ್ತಿದ್ದುದನ್ನು ಖಂಡಿಸಿ, “ಯಾವುದೇ ಅನ್ಯಾಯವಾಗಿದ್ದರೆ ಪೊಲೀಸರಿಗೆ ದೂರು ನೀಡಿ” ಎಂದು ಹೇಳಿದ್ದಕ್ಕೆ ಕಾರಿನಲ್ಲಿದ್ದ ನಾಲ್ವರು ಹೊರಬಂದು ದಲಿತ ಮುಖಂಡ ಮುರಳಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮುರಳಿಯವರನ್ನು ಸ್ಥಳೀಯರು ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಾಗ, “ಮದ್ದು ಕೊಡುತ್ತೇನೆ, ದಾಖಲಿಸುವುದಿಲ್ಲ. ನನಗೆ ನ್ಯಾಯಾಲಯಕ್ಕೆ ಹೋಗುವ ಕೆಲಸವಲ್ಲ” ಎಂದು ವೈದ್ಯ ಗುರುದತ್ತ್ ಉಡಾಫೆಯಾಗಿ ವರ್ತಿಸಿ, ಎಂಎಲ್‌ಸಿ ಮಾಡಿ ವಾಪಸ್ ಕಳುಹಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ಆರೋಪಿಸಿದೆ.

ಈ ವಿಚಾರವನ್ನು ಪ್ರಶ್ನಿಸಿದ ಸಂಘಟನೆಯ ಮುಖಂಡರೊಂದಿಗೂ ವೈದ್ಯರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ದೂರಿದೆ.

Leave a Reply

Your email address will not be published. Required fields are marked *

error: Content is protected !!