6 ಬಿಜೆಪಿ ಸಂಸದರಲ್ಲಿ ಒಬ್ಬರು ಮತಗಳ್ಳತನದಿಂದ ಗೆದ್ದವರು- ಅವರನ್ನು ನುಸುಳುಕೋರರು ಎಂದು ಕರೆಯಬಹುದೇ?: ರಾಹುಲ್ ಗಾಂಧಿ

Oplus_131072

ಹೊಸದಿಲ್ಲಿ, ಮೇ 6: ಲೋಕಸಭೆಯಲ್ಲಿರುವ ಪ್ರತಿ ಆರು ಬಿಜೆಪಿ ಸಂಸದರ ಪೈಕಿ ಒಬ್ಬರು ‘‘ಮತಗಳ್ಳತನ’’ದ ಮೂಲಕ ಗೆದ್ದವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಬಿಜೆಪಿಯ ಪದಪ್ರಯೋಗವನ್ನು ಬಳಸಿಕೊಂಡು, ಅವರನ್ನು ‘ಘುಸ್‌ಪೇಠಿಯ’ (ನುಸುಳುಕೋರರು) ಎಂದು ಕರೆಯಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.

ನ್ಯಾಯೋಚಿತ ಚುನಾವಣೆ ನಡೆದರೆ, ಈಗಲೂ ಬಿಜೆಪಿಗೆ 140ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

‘‘ಮತಗಳ್ಳತನದ ಮೂಲಕ ಕೆಲವು ಸಲ ಕ್ಷೇತ್ರಗಳನ್ನು ಕದಿಯಲಾಗುತ್ತದೆ ಹಾಗೂ ಕೆಲವು ಸಲ ಇಡೀ ಸರಕಾರವನ್ನೇ ದರೋಡೆಗೈಯಲಾಗುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ಹೇಳಿದ್ದಾರೆ.

‘‘ಲೋಕಸಭೆಯಲ್ಲಿರುವ 240 ಬಿಜೆಪಿ ಸಂಸದರ ಪೈಕಿ ಸುಮಾರು ಪ್ರತಿ ಆರರಲ್ಲಿ ಒಬ್ಬರು ಮತಗಳ್ಳತನದ ಮೂಲಕ ಗೆದ್ದವರು’’ ಎಂದು ಅವರು ಆರೋಪಿಸಿದ್ದಾರೆ.

‘‘ಅವರನ್ನು ಪತ್ತೆಹಚ್ಚುವುದು ಕಷ್ಟವಲ್ಲ. ಬಿಜೆಪಿಯ ಪರಿಭಾಷೆಯಲ್ಲೇ ಹೇಳುವುದಾದರೆ, ನಾವು ಅವರನ್ನು ‘ಘುಸ್‌ಪೇಠಿಯ’ ಎಂದು ಕರೆಯಬೇಕೇ? ಹರಿಯಾಣದ ಕತೆ ಏನು? ಅಲ್ಲಿ ಇಡೀ ಸರಕಾರವೇ ನುಸುಳುಕೋರವಾಗಿದೆ. ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಸಂಸ್ಥೆಗಳನ್ನೇ ಅವರು ತಮ್ಮ ಜೇಬುಗಳಲ್ಲಿ ಇಟ್ಟುಕೊಂಡಿದ್ದಾರೆ. ಮತದಾರರ ಪಟ್ಟಿಗಳು ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಅವರು ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ. ಈ ಸಂಸ್ಥೆಗಳ ರಿಮೋಟ್ ಕಂಟ್ರೋಲ್ ಅವರ ಕೈಗಳಲ್ಲಿದೆ’’ ಎಂದು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ಹೇಳಿದರು.

‘‘ಅವರು ಹೆದರುವುದು ಸತ್ಯಕ್ಕೆ ಮಾತ್ರ. ಯಾಕೆಂದರೆ, ನ್ಯಾಯೋಚಿತ ಚುನಾವಣೆ ನಡೆದರೆ ಈಗಲೂ ಅವರಿಗೆ 140 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!