ʼಗೊಂದಲದ ಗೂಡುʼ : ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆ ಸ್ಥಗಿತ
ಚಿಕ್ಕಮಗಳೂರು : ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ನಡೆಸಲಾದ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಮತ ಎಣಿಕೆ ಕಾರ್ಯವನ್ನು ರಾತ್ರಿ ವೇಳೆ ಚುನಾವಣಾಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಅಂಚೆ ಮತಗಳ ಮರು ಎಣಿಕೆ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನಲೆಯಲ್ಲಿ ಶನಿವಾರ ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ಅಂಚೆ ಮತಗಳ ಮರು ಎಣಿಕೆ ಕಾರ್ಯ ಆರಂಭಿಸಲಾಗಿತ್ತು. ಬೆಳಗ್ಗೆ ಸ್ಟ್ರಾಂಗ್ ರೂಮ್‍ನಿಂದ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಮತ ಪತ್ರಗಳನ್ನು ಒಳಗೊಂಡ ಪೆಟ್ಟಿಗೆಗಳನ್ನು ಐಡಿಎಸ್‍ಜಿ ಕಾಲೇಜಿಗೆ ತರಲಾಯಿತು. ಚುನಾವಣೆ ನಡೆದು ಮೂರು ವರ್ಷಗಳ ಕಳೆದ ಹಿನ್ನಲೆಯಲ್ಲಿ ಅಂಚೆ ಮತಗಳನ್ನು ಇರಿಸಿರುವ ಮತಪೆಟ್ಟಿಗೆಯ ಗುರುತಿಸುವಿಕೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತು.
ಈ ನಡುವೆ ಮತ ಪೆಟ್ಟಿಗೆಗಳು ವಿರೂಪಗೊಂಡಿದ್ದ ಹಿನ್ನಲೆಯಲ್ಲಿ ಟ್ರಂಕ್ ಬೀಗಗಳು ಮುರಿದಿವೆ, ಮತಪೆಟ್ಟಿಗೆ ಟ್ಯಾಂಪರ್ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ ಚುನಾವಣಾಧಿಕಾರಿಗಳು ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ.
ಆಕ್ಷೇಪಗಳ ನಡುವೆಯೂ ಅಂಚೆ ಮತಗಳು ಇರುವ ಮತಪೆಟ್ಟಿಗೆಯನ್ನು ಪತ್ತೆ ಹಚ್ಚಿದ ಅಧಿಕಾರಿಗಳು 1828 ಮತಗಳಲ್ಲಿ ತಿರಸ್ಕೃತ 279 ಮತಗಳನ್ನು ಪ್ರತೇಕವಾಗಿ ವಿಂಗಡಣೆ ಮಾಡಲು ತಲಾ 25ರಂತೆ ಬಂಡಲ್‍ಗಳನ್ನು ಮಾಡುವಷ್ಟರಲ್ಲಿ ಅಧಿಕಾರಿಗಳು ಹೈರಾಣಾಗಿದ್ದರು. ನ್ಯಾಯಾಲಯದಲ್ಲಿ 279 ಮತಗಳು ತಿರಸ್ಕೃತಗೊಂಡಿದೆ ಎಂದು ವಿವಾದ ಸೃಷ್ಟಿಯಾಗಿದ್ದರೂ. ತಿರಸ್ಕೃತ ಮತಗಳನ್ನು ಪ್ರತ್ಯೇಕ ಮಾಡುವ ಸಂದರ್ಭದಲ್ಲಿ 9 ಮತ ಪತ್ರಗಳು ಕಾಣೆಯಾಗಿ ಗೊಂದಲ ಸೃಷ್ಟಿಯಾಯಿತು. 9 ಮತಪತ್ರಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿ ಕಡೆಗೂ ದೊರೆತಿಲ್ಲ ಎನ್ನಲಾಗುತ್ತಿದೆ.
ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬೂತ್‍ನಿಂದ ಹೊರಬಂದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಅವರು ಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಲ್ಲವೂ ಸರಿ ಇದೆ ಎಂದು ನೀಡಿದ ಹೇಳಿಕೆಯನ್ನು ಆಧರಿಸಿ, ಕಾಂಗ್ರೆಸ್ ಕಾರ್ಯಕರ್ತರು ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಮತ ಎಣಿಕೆ ಕೇಂದ್ರಕ್ಕೆ ಸ್ಥಳೀಯ ಮಾದ್ಯಮ ಪ್ರತಿನಿಧಿಗಳನ್ನು ಸೇರಿದಂತೆ ಯಾರಿಗೂ ಪ್ರವೇಶ ನೀಡದೇ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಸಮರ್ಪಕ ಮಾಹಿತಿ ಲಭ್ಯವಾಗದೆ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಕ್ಷಣ ಕ್ಷಣದ ಊಹಪೂಹದ ಸುದ್ದಿಗಳಿಂದ ಗೊಂದಲ ಅನುಭವಿಸಬೇಕಾಯಿತು.
279 ತಿರಸ್ಕೃತ ಮತಗಳೊಂದಿಗೆ 1540 ಅರ್ಹ ಮತಗಳನ್ನು ಎಣಿಕೆ ಮಾಡುವ ಸಂದರ್ಭದಲ್ಲಿ 157 ಮತಪತ್ರಗಳಿಗೆ ಡಬಲ್ ಟಿಕ್ ಆಗಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿ.ಡಿ.ರಾಜೇಗೌಡ ಡಬಲ್ ಟಿಕ್ ಹೇಗೆ ಬಂತು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿ ಟ್ಯಾಂಪರಿಂಗ್ ಆಗಿದೆ ಎಂದು ಆರೋಪಿಸಿ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಮತ ಎಣಿಕೆ ಕೇಂದ್ರದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ಜೀವರಾಜ್ ಹಾಗೂ ಟಿ.ಡಿ.ರಾಜೇಗೌಡ ಬೆಂಬಲಿಗರ ನಡುವೆ ವಾಗ್ವಾದ ನಡೆದು ಮತ ಎಣಿಕೆ ಕೇಂದದ ಆವರಣದಲ್ಲಿ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಪೊಲೀಸರು ಶಸಸ್ತ್ರ ಮೀಸಲು ಪಡೆಯ ಪೊಲೀಸರನ್ನು ಮತ ಎಣಿಕ ಕೇಂದ್ರದ ಬಳಿ ಬಂದೋಬಸ್ತ್ ಗೆ ನಿಯೋಜಿಸಲಾಯಿತು. ರಾತ್ರಿ 7.30 ರ ವೇಳೆಗೆ ಮತ ಎಣಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಬಿಜೆಪಿ ಕಾರ್ಯಕರ್ತರು 1822 ಮತಪತ್ರಗಳ ಎಣಿಕೆ ರಾತ್ರಿಯಾದರೂ ಪೂರ್ಣಗೊಂಡಿಲ್ಲ, ಮತ ಎಣಿಕೆ ವೇಳೆ ಏನೋ ಅಕ್ರಮ ನಡೆದಿದೆ ಎಂದು ಆರೋಪಿಸಿ ಮತ ಎಣಿಕೆ ಕೇಂದ್ರದ ಎದುರಿನ ರಸ್ತೆಯಲ್ಲಿ ರಸ್ತೆ ನಡೆಸಿದರು.
ಒಟ್ಟಾರೆ ರಾಜ್ಯದ ಗಮನ ಸೆಳೆದಿದ್ದ ಶೃಂಗೇರಿ ಕ್ಷೇತ್ರದ ಮತಗಳ ಎಣಿಕೆ ಪ್ರಕ್ರಿಯೆ ತೀವ್ರ ಗೊಂದಲದ ಗೂಡಾಗಿದ್ದು, ಈ ಗೊಂದಲಗಳ ಬಗ್ಗೆಯೂ ಜಿಲ್ಲಾಧಿಕಾರಿಯಾಗಲೀ, ಚುನಾವಣಾಧಿಕಾರಿಯಾಗಲೀ ಯಾವುದೇ ಸ್ಪಷ್ಟನೆ ನೀಡದಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
ಗೊಂದಲಗಳಿಗೆ ಬಿಜೆಪಿ ಅಭ್ಯರ್ಥಿಯೇ ಕಾರಣ :
“ಈ ಗೊಂದಲಗಳಿಗೆ ಬಿಜೆಪಿ ಅಭ್ಯರ್ಥಿಯೇ ಕಾರಣ, ಇಡೀ ರಾಜ್ಯದಲ್ಲಿ ಇಂತಹ ಕೆಲವೇ ಕೆಲ ವ್ಯಕ್ತಿಗಳಿದ್ದಾರೆ. ನನಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಇವರ ನಡವಳಿಕೆಯಿಂದ ನನ್ನ ಮನಸಿಗೆ ನೋವುಂಟಾಗಿದೆ. ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸದಾ ಅಡ್ಡಗಾಲು ಹಾಕುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ವಿಚಾರಗಳಲ್ಲೂ ತೊಂದರೆ ನೀಡಿದ್ದಾರೆ. ಕ್ಷೇತ್ರದ ಹಿಂದಿನ ಶಾಸಕ ಜೀವರಾಜ್ ಅವಧಿಯಲ್ಲಿ ಕಾಮಗಾರಿಗಳ ಗುತ್ತಿಗೆದಾರರಿಗೆ ಕಿರುಕುಳ ನೀಡಿದ್ದರು. ಕೆಲ ಗುತ್ತಿಗೆದಾರರು ಬೀದಿಪಾಲಾಗಿದ್ದರೆ, ಅವರದೇ ಪಕ್ಷದ ಓರ್ವ ಗುತ್ತಿಗೆದಾರ ಇವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ”- ಟಿ.ಡಿ. ರಾಜೇಗೌಡ, ಶೃಂಗೇರಿ ಕ್ಷೇತ್ರದ ಶಾಸಕ
–





