ಕಾಪು: ಸರಣಿ ಅಪಘಾತ-ಸ್ಕೂಟರ್ ಸವಾರ ಮೃತ್ಯು

ಕಾಪು: ಸ್ಕಾರ್ಪಿಯೋ ಕಾರು, ಟ್ಯಾಂಕರ್ ಮತ್ತು ಸ್ಕೂಟರ್ ನಡುವಿನ ಸರಣಿ ಅಪಘಾತ ಸಂಭವಿಸಿ ಸ್ಕೂಟರ್ ಸಹ ಸವಾರ ಮೃತಪಟ್ಟ ಘಟನೆ ಕಾಪು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದ ಬಳಿ ಗುರುವಾರ ಸಂಜೆ ಸಂಭವಿಸಿದೆ.

ಮೃತರನ್ನು ವಿಶ್ವನಾಥ ಕೆ.ಪುತ್ರನ್ ಎಂದು ಗುರುತಿಸಲಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಸಂತೋಷ್ ಎನ್. ಅಮೀನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೈಪುಂಜಾಲು ನಿವಾಸಿ ಸಂತೋಷ್ ಅಮೀನ್ ಅವರು ತಮ್ಮ ಸ್ನೇಹಿತ ವಿಶ್ವನಾಥ ಅವರೊಂದಿಗೆ ಸ್ಕೂಟರ್‌ನಲ್ಲಿ ಕಾಪುವಿಗೆ ಹೋಗುತ್ತಿದ್ದರು.

ಸಂಜೆ 5:30ರ ಸುಮಾರಿಗೆ ಪಾಂಗಾಳದ ಬಳಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ, ಮಂಗಳೂರಿನಿಂದ ಉಡುಪಿ ಕಡೆಗೆ ಅತಿವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಶ್ವನಾಥ ಅವರು ರಸ್ತೆಯ ಬಲ ಭಾಗಕ್ಕೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಸ್ಕಾರ್ಪಿಯೋ ಕಾರಿನ ಹಿಂದೆಯೇ ಅಂತರ ಕಾಯ್ದುಕೊಳ್ಳದೆ ಅತಿವೇಗವಾಗಿ ಬಂದ ಟ್ಯಾಂಕರ್ ರಸ್ತೆಯಲ್ಲಿ ಬಿದ್ದಿದ್ದ ವಿಶ್ವನಾಥ ಅವರ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸ್ಕಾರ್ಪಿಯೋ ಚಾಲಕ ಸುಧಾಕರ ಆಚಾರ್ಯ ಮತ್ತು ಟ್ಯಾಂಕರ್ ಚಾಲಕ ರಾಜೇಶ್ ಅವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!