16 ರಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಒಂದರ ಹಿಂದೆ ಒಂದು ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಮತ್ತೊಂದು ಪ್ರತಿಭಟನೆಗೆ ರಾಜ್ಯದಲ್ಲಿ ಸಿದ್ದತೆ ನಡೆಯುತ್ತಿದೆ. ರಾಜ್ಯದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕ್ಯಾಮ್ಸ್) ವು ಡಿಸೆಂಬರ್ 16ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕ್ಯಾಮ್ಸ್)ದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು, ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆ, ಶಿಕ್ಷಕರು ಉಳಿದರೆ ಶಿಕ್ಷಣ ಉದ್ದೇಶದೊಂದಿಗೆ ನಡೆಯಲಿದೆ. ಇದೊಂದು ಸಾಂಕೇತಿಕ ಹೋರಾಟವಾಗಿದ್ದು, ನಾನಾ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಆಯಾ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದ್ದು, ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕೋವಿಡ್ ಲಸಿಕೆ ಮೊದಲ ಹಂತದಲ್ಲಿಯೇ ಕೊಡಬೇಕು. ಖಾಸಗಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಆಹಾರ ಕಿಟ್ ವಿತರಿಸುವುದು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಗೌರವ ಧನ ನೀಡಬೇಕು. ಖಾಸಗಿ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸರಕಾರ ಪ್ರತ್ಯೇಕ ವಿಮಾ ಸೌಲಭ್ಯ ನೀಡಬೇಕು ಹೀಗೆ ವಿವಿಧ ಬೇಡಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದ್ದು, ಈಡೇರಿಸದ ಪಕ್ಷದಲ್ಲಿ ಖಾಸಗಿ ಶಿಕ್ಷಕರು ಕೂಡ ಸಾರಿಗೆ ನೌಕರರ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. |