ಉಡುಪಿ: ನಗರದ ಮುಖ್ಯ ರಸ್ತೆಯಲ್ಲಿ ಉರುಳಿದ ಮರ- ಮಹಿಳೆ ಪಾರು

ಉಡುಪಿ: ನಗರದ ವಿದ್ಯಾರತ್ನ ಕಟ್ಟಡದ ಎದುರಿನ, ಹಳೆ ಜಟ್ಕಾ ಸ್ಟ್ಯಾಂಡ್ ಬಳಿಯ ಮರವೊಂದು ಮುಖ್ಯ ರಸ್ತೆಗೆ ಉರುಳಿ ಬಿದ್ದಿದೆ.  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. 

ಇಂದು ಹಲವು ವಾಹನಗಳು ಸಂಚರಿಸುವ ಜನಸಂದಣಿ ಇರುವ ಹಳೆ ಜಟ್ಕಾ ಸ್ಟ್ಯಾಂಡ್ ಬಳಿ ಏಕಾಏಕಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಅಲ್ಲೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಸೇರಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಉಡುಪಿ ನಗರದ ಕೆಲವೆಡೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಎಂದು ಸಾರ್ವಜನಿಕರು ನಗರಸಭೆಯನ್ನು ಒತ್ತಾಯಿಸುತ್ತಲೇ ಬರುತ್ತಿದ್ದಾರೆ, ಆದರೆ ಮಳೆಗಾಲಕ್ಕೆ ಇನ್ನೊಂದೇ ತಿಂಗಳು ಬಾಕಿ ಇದ್ದರೂ ಅಪಾಯಕಾರಿ ಮರಗಳನ್ನು ತೆರವು ಮಾಡುವ ಕೆಲಸಕಾರ್ಯ ಮಾತ್ರ ವಿಳಂಬವಾಗುತ್ತಿದೆ. ಇದೀಗ ಮರಗಳು ರಸ್ತೆಗೆ ಉರುಳಿ ಬೀಳುತ್ತಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಲಿ. ಎಲ್ಲೆಲ್ಲಿ ಅಪಾಯಕಾರಿ ಮರಗಳಿವೆ ಎನ್ನುವ ಬಗ್ಗೆ ಮಾಹಿತಿ ಪಡೆದು ಅದನ್ನು ತೆರವುಗೊಳಿಸಲಿ ಎನ್ನುವ ಆಗ್ರಹ ವ್ಯಕ್ತವಾಗಿದೆ. 

Leave a Reply

Your email address will not be published. Required fields are marked *

error: Content is protected !!