ಗೋ ಕಳ್ಳರಿಗೆ ನೆರವಾಗುತ್ತಿದ್ದ ಬಜರಂಗದಳ ಮಾಜಿ ಸಂಚಾಲಕ ಅಂದರ್!
ಕಾರ್ಕಳ: ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಬಜರಂಗದಳದ ಮಾಜಿ ಸಂಚಾಲಕ ನೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಪ್ರಭು ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಎಂಬಾತನ ವಿಚಾರಣೆ ವೇಳೆ, ಅನಿಲ್ ಪ್ರಭು ದನಗಳನ್ನು ಕಳವುಗೈದು ವಧಿಸಿ ಮಾಂಸ ಮಾರಾಟ ಮಾಡುವ ಜಾಲದವರಿಗೆ ಸಹಕಾರ ನೀಡಿ, ಅವರಿಂದ ಪಾಲು ಪಡೆಯುತ್ತಿದ್ದ ಎಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಅದರನ್ವಯ ಪೊಲೀಸರು ಅನಿಲ್ ಪ್ರಭುನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನವಂಬರ್ 6ರಂದು ಕಾರ್ಕಳ ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಎಂಬಾತನು ಬಂಗ್ಲೆಗುಡ್ಡೆಯಿಂದ ನಕ್ರೆ ಜಂಕ್ಷನ್ ಕಡೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ. ಈ ವೇಳೆ ಈತನನ್ನು ಪೊಲೀಸರು ತಡೆದ ಸಂದರ್ಭ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಅರ್ಧದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಈತನ ವಾಹನವನ್ನು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲದ ಒಳಗೆ ದನದ ತಲೆ, ದನದ ಮಾಂಸ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ , ಜಯಂತಿನಗರದ ಜೀರ್ ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಅನಿಲ್ ಪ್ರಭು ಇವರಿಗೆ ಸಹಕಾರ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.