ಉಡುಪಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿ- ಆಕ್ಷೇಪಣೆಗಳಿಗೆ ಆಹ್ವಾನ
ಏಳು ತಾಲೂಕುಗಳ ಪಂಚಾಯಿತಿಗಳಿಗೆ ಸದಸ್ಯರ ಸಂಖ್ಯೆ ಪ್ರಕಟಣೆ; ಏಪ್ರಿಲ್ 24ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಉಡುಪಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ನಿಗದಿಪಡಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5 ಹಾಗೂ 308(ಇ)(ಎಫ್) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಬಳಸಿ, ಉಡುಪಿ ಜಿಲ್ಲೆಯ ಏಳು ತಾಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆಯನ್ನು ಆಯೋಗವು ನಿರ್ಧರಿಸಿದೆ. ಪ್ರಕಟಿತ ಕೋಷ್ಟಕದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆಯನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ.


ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆ ಹೊರಬಂದ ದಿನಾಂಕದಿಂದ ಏಳು ದಿನಗಳ ಒಳಗಾಗಿ, ಅಂದರೆ ಏಪ್ರಿಲ್ 24, 2026 ಸಂಜೆ 5.00 ಗಂಟೆಯೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ/ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಅಂಚೆ ಮೂಲಕ ಕಳುಹಿಸುವ ಆಕ್ಷೇಪಣೆಗಳು ಕೂಡಾ ನಿಗದಿತ ದಿನಾಂಕದೊಳಗೆ ಆಯೋಗಕ್ಕೆ ತಲುಪಿರಬೇಕು. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಂಚೆ ವಿಳಂಬಕ್ಕೆ ಆಯೋಗ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಲಾಗಿದೆ.

ಆನ್‌ಲೈನ್ ಮೂಲಕ ಸಲ್ಲಿಕೆ:
ಸಾರ್ವಜನಿಕರು https://rdpr.karnataka.gov.in/rdc/public/ ವೆಬ್‌ಸೈಟ್‌ಗೆ ಭೇಟಿ ನೀಡಿ, ಎಡಭಾಗದಲ್ಲಿರುವ “ಸಾರ್ವಜನಿಕ ಸಲಹೆಗಳು” ವಿಭಾಗವನ್ನು ಕ್ಲಿಕ್ ಮಾಡಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.





