ಬಡಗಬೆಟ್ಟು ಸೊಸೈಟಿ 2025-26ನೇ ಸಾಲಿನಲ್ಲಿ 18.13ಕೋಟಿ ರೂ ಲಾಭ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ 4062.29 ರೂ. ಕೋಟಿ ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ 108 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಂಘವು, 2025-26ನೇ ಆರ್ಥಿಕ ವರ್ಷಾಂತ್ಯಕ್ಕೆ 22,869 ಸದಸ್ಯರನ್ನು ಹೊಂದಿದ್ದು, ವರದಿ ವರ್ಷಾಂತ್ಯಕ್ಕೆ 658.80 ಕೋಟಿ ರೂ. ಠೇವಣಿ ಸಂಗ್ರಹಿಸಿ, ಕಳೆದ ಸಾಲಿಗಿಂತ ಶೇ.14.93 ರಷ್ಟು ಏರಿಕೆ ಸಾಧಿಸಿದೆ ಎಂದರು.

ವರದಿ ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ 533.96 ಕೋಟಿ ರೂ. ಆಗಿದ್ದು, ಇದು ಕಳೆದ ಸಾಲಿಗಿಂತ ಶೇ.11.94ರಷ್ಟು ಏರಿಕೆಯಾಗಿದೆ. ಸಂಘವು 117.60 ಕೋಟಿ ರೂ. ನಿಧಿಗಳು ಹಾಗೂ ರೂ. 268.30 ಕೋಟಿ ಹೂಡಿಕೆಗಳನ್ನು ಹೊಂದಿದ್ದು, ಒಟ್ಟು ರೂ. 791.46 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.

ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಶಾಖೆಗಳು ಸಂಘದ ಸ್ವಂತ ನಿವೇಶನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಘದ 12ನೇ ಶಾಖೆಗಾಗಿ ಕುಂದಾಪುರದ ಹೃದಯ ಭಾಗದಲ್ಲಿ ಸ್ವಂತ ಕಚೇರಿ ಖರೀದಿಸಲಾಗಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಸಂಘವು ಪ್ರತಿ ವರ್ಷ ಸುಮಾರು 25ಲಕ್ಷ ರೂ.ವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ.

ಡಿಜಿಟಲೀಕರಣದ ಭಾಗವಾಗಿ ಅಭಿವೃದ್ಧಿಪಡಿಸಿದ ಚೇತನಾ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಮ್ಮ ಖಾತೆ ಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ ಹಾಗೂ ಸಂಘದ ನೂತನ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿ ಗಾಗಿ ಸಮೀಪದ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಸಂಘದ ಎಲ್ಲಾ ಶಾಖೆಗಳಲ್ಲಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಸೇವೆ, ಹಣ ವರ್ಗಾವಣೆ ಸೌಲಭ್ಯ, ಆರೋಗ್ಯ ಕಾರ್ಡ್, ವಿಮಾ ಸೇವೆಗಳು, ದೈನಿಕ ಠೇವಣಿ ಸಂಗ್ರಾಹಕರಿಗೆ ಮೊಬೈಲ್ ಮೂಲಕವೇ ಠೇವಣಿ ಸಂಗ್ರಹಣೆಗೆ ಅವಕಾಶ ಒದಗಿಸಿರುವುದು, 0 ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಹಾಗೂ ಉಚಿತ ಎಸ್‌ಎಂಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಪಿ.ಶೆಟ್ಟಿ, ಉಮಾನಾಥ ಎಲ್., ಪದ್ಮನಾಭ ನಾಯಕ್, ಹಾಜಿ ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್.ಭಟ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಲೆಕ್ಕಿಗ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

1400 ಕೋಟಿ ರೂ. ವ್ಯವಹಾರ ಗುರಿ

ಮುಂದಿನ ವರ್ಷದಲ್ಲಿ 750 ಕೋಟಿ ರೂ. ಠೇವಣಿ ಹಾಗೂ 650 ಕೋಟಿ ರೂ. ಸಾಲ ವಿತರಣೆ ಸೇರಿದಂತೆ ಒಟ್ಟು 1400 ಕೋಟಿ ರೂ. ವ್ಯವಹಾರ ನಡೆಸುವ ಗುರಿಯನ್ನು ಸಂಸ್ಥೆಯು ಹೊಂದಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿಯ ಹೃದಯಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ ಸಹಕಾರ ಸೌಧ ನಿರ್ಮಾಣದ ಯೋಜನೆಯನ್ನು ಕೈಗೊಂಡಿದೆ. ಪ್ರತಿಯೊಂದು ಶಾಖೆಯಲ್ಲಿ ಶಾಖಾ ಸಲಹಾ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳ ಮೇಲ್ವಿಚಾರಣೆ ಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.

1 thought on “ಬಡಗಬೆಟ್ಟು ಸೊಸೈಟಿ 2025-26ನೇ ಸಾಲಿನಲ್ಲಿ 18.13ಕೋಟಿ ರೂ ಲಾಭ: ಜಯಕರ ಶೆಟ್ಟಿ ಇಂದ್ರಾಳಿ

Leave a Reply

Your email address will not be published. Required fields are marked *

error: Content is protected !!