ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ಮೋದಿ ಸಹಿತ ಅನೇಕ ಗಣ್ಯರ ಸಂತಾಪ

ಉಡುಪಿ: ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಿ, ಸಾಹಿತ್ಯಕ್ಕೆ ನೀಡಿರುವ ಅಪಾರ ಕೊಡುಗೆಗಳಿಂದಾಗಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಬಗೆಗೆ ಅವರು ತೋರಿರುವ ಉತ್ಸಾಹ ಶ್ಲಾಘನೀಯ ಎಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟ್ವೀಟ್‌ ಮಾಡಿ, ‘ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಿದೆ’ ಎಂದು ಸಂತಾಪ ಸೂಚಿಸಿದ್ದಾರೆ.

ಆಧ್ಯಾತ್ಮ ಕ್ಷೇತ್ರದ ಆಲದಮರದಂತಿದ್ದ ಬನ್ನಂಜೆ ಗೋವಿಂದಾಚಾರ್ಯರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಈಚೆಗೆ ಅವರ ನಿವಾಸಕ್ಕೆ ಭೇಟಿನೀಡಿದ್ದ ಸಂದರ್ಭ ಶುಭ ಹಾರೈಸಿ, ಸರ್ಕಾರಕ್ಕೆ ಕೆಲವು ಸಲಹೆ ಹಾಗೂ ನಿರ್ದೇಶನಗಳನ್ನು ನೀಡಿದ್ದರು. ಅನುಭವದ ಮಾತುಗಳನ್ನು ಹಂಚಿಕೊಂಡಿದ್ದರು ಎಂದು ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಸಂತಾಪ ಸೂಚಿಸಿದರು.

‘ಬನ್ನಂಜೆ ಗೋವಿಂದಾಚಾರ್ಯರು ದೇವರ ಸಂಪೂರ್ಣ ಅನುಗ್ರಹ ಪಡೆದವರಾಗಿದ್ದು. ದೇವರ ಮಾತುಗಳು ಅವರ ಬಾಯಿಂದ ಉಚ್ಛಾರವಾಗುತ್ತಿದ್ದವು. ಕ್ರಿಶ್ಚಿಯನ್‌ ಹಾಗೂ ಮುಸ್ಲಿಮರು ಕೂಡ ಗೋವಿಂದಾಚಾರ್ಯರ ಪ್ರವಚನ ಕೇಳಿ ಸಂತೋಷ ಪಟ್ಟಿದ್ದನ್ನು ಕಂಡಿದ್ದೇನೆ. ಸಚಿವನಾಗಿದ್ದ ಅವಧಿಯಲ್ಲಿ ಕಂಗಾನುಮಠದ ಬಳಿ ಕೆರೆ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಇಟ್ಟ ಕೂಡಲೇ ಪೂರೈಸಿ ಅವರಿಂದಲೇ ಶಿಲಾನ್ಯಾಸ ನೆರವೇರಿಸಿದ್ದೆ. ಕೆಲವು ಸಲ ಬಾಯಿತಪ್ಪಿ ಮಾತನಾಡಿ ತೊಂದರೆಗೆ ಸಿಲುಕಿದಾಗ ಆಚಾರ್ಯರು ನನ್ನ ಪರವಾಗಿ ನಿಂತು ಸಮರ್ಥನೆ ಮಾಡಿಕೊಂಡಿದ್ದನ್ನು ಮರೆಯುವುದಿಲ್ಲ. ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಒಂದು ಯುಗ ಅಂತ್ಯವಾದಂತಾಗಿದೆ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಮಾಲಿಕೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾದ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. – ಪ್ರಮೋದ್ ಮಧ್ವರಾಜ್‌, ಮಾಜಿ ಸಚಿವ

ಅಪಾರ ಅಭಿಮಾನಿ ಬಳಗ ಹೊಂದಿದ್ದರು’

ಮಾಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರು ಅಗಲಿರುವುದು ಸಮಾಜಕ್ಕೆ ತುಂಬಲಾರದ ನಷ್ಟ. ಅನಾರೋಗ್ಯ ಕಾರಣದಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಅವರ ಅಧ್ಯಯನ, ಬರವಣಿಗೆ, ಪ್ರವಚನಗಳು ನಿಂತಿರಲಿಲ್ಲ. ಈಚೆಗೆ ನಿಧನರಾದ ಪುತ್ರ ವಿಜಯಭೂಷಣರ 12ನೇ ದಿನದ ಉತ್ತರಾಧಿ ಕ್ರಿಯೆ ‌ನಡೆಯುತ್ತಿರುವಾಗಲೇ ಅವರು ನಿಧನರಾಗಿದ್ದಾರೆ. ದೇಶ ವಿದೇಶಗಳಲ್ಲಿ ಅಪಾರ ಅಭಿಮಾನ ಬಳಗ ಹೊಂದಿರುವ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ ಸ್ವಗೃಹದಲ್ಲಿ ಭಾನುವಾರ ಸಂಜೆ ನಡೆಯಲಿದೆ.

– ರಘುಪತಿ ಭಟ್‌, ಶಾಸಕ

ಪುತ್ರಶೋಕದಿಂದ ನೊಂದಿದ್ದ ಅಪ್ಪ: ನಾಲ್ಕು ದಿನಗಳಿಂದ ತಂದೆ ತೀವ್ರ ಅನಾರೋಗ್ಯ ಪೀಡಿತರಾಗಿದ್ದರು. ಪುತ್ರಶೋಕದಿಂದ ತುಂಬಾ ನೊಂದಿದ್ದರು. 2 ದಿನಗಳಿಂದ ಸರಿಯಾಗಿ ನಿದ್ದೆ ಮಾಡದೆ ನಿರಂತರವಾಗಿ ಕೊರಗುತ್ತಿದ್ದರು. ಭಾನುವಾರ ಕಫ ಹೆಚ್ಚಾಗಿ ಉಸಿರಾಡಲು ಕಷ್ಟವಾಗತೊಡಗಿದಾಗ ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿಕೊಳ್ಳುವಾಗಲೇ ಪ್ರಾಣಬಿಟ್ಟರು. ಪುತ್ರ ವಿಜಯಭೂಷಣನ 12ನೇ ದಿನದ ಉತ್ತರಾಧಿ ಕಾರ್ಯಗಳನ್ನೆಲ್ಲ ಸ್ಥಿತಪ್ರಜ್ಞರಾಗಿ ವೀಕ್ಷಿಸಿ, ವಿಧಿವಿಧಾನಗಳೆಲ್ಲ ಪೂರ್ಣಗೊಂಡ 10 ನಿಮಿಷದ ಬಳಿಕ ಕೊನೆಯುಸಿರೆಳೆದರು.

– ವಿನಯ ಭೂಷಣ ಆಚಾರ್ಯರು, ಬನ್ನಂಜೆ ಗೋವಿಂದಾಚಾರ್ಯರ ಪುತ್ರ

ಆಚಾರ್ಯರ ನಿಧನದ ಸುದ್ದಿ ತಿಳಿಯತ್ತಿದ್ದಂತೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್,‌ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಂತಿಮ ದರ್ಶನ ಪಡೆದರು. ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!