ಹಿಂದುಗಳಿಗೆ ಉಚಿತವಾಗಿ ಶಿಕ್ಷಣ ನೀಡಿ ಎನ್ನುವುದು ಸಮಾಜಘಾತಕ ಪ್ರಶ್ನೆಯೆ- ಪ್ರದೀಪ್ ಬೇಲಾಡಿ
ಉಡುಪಿ: ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಅವರು RSS ಪ್ರೇರಿತ ವಿಶ್ವಸ್ಥ ಮಂಡಳಿಯ ಶಾಲೆಗಳು 1.5 ಲಕ್ಷದಿಂದ 2 ಲಕ್ಷದ ತನಕ ಶುಲ್ಕ ಪಡೆಯುತ್ತವೆ, ಹಿಂದುತ್ವ ರಾಷ್ಟ್ರೀಯತೆ ಎನ್ನುವ ಬಿಜೆಪಿ ಶಾಸಕರುಗಳು ಹಿಂದೂಗಳ ಮತಗಳಿಂದ ಗೆದ್ದ ಬಿಜೆಪಿ ಶಾಸಕರುಗಳು ಈ ಬಗ್ಗೆ ಯಾಕೆ ಮೌನವಾಗಿದ್ದಾರೆ ಎನ್ನುವ ಪ್ರಶ್ನೆಯನ್ನು ಮಾಡಿದ್ದರು. ಪ್ರಸಾದ್ ಕಾಂಚನ್ ಎತ್ತಿರುವ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ, ಯಾಕೆಂದರೆ ದೇಶಭಕ್ತಿ ರಾಷ್ಟ್ರೀಯತೆ ಸಂಸ್ಕಾರ ಕಲಿಸುತ್ತೇವೆ ಎನ್ನುವ ಬಿಜೆಪಿ ಪರ ಸಂಘಟನೆಗಳ ಶಾಲೆಗಳು ಹಿಂದುಗಳಿಗೆ ಕಡಿಮೆ ಶುಲ್ಕದಲ್ಲಿ ಅಥವಾ ಉಚಿತವಾಗಿ ಕಲಿಸಿದರೆ ಉತ್ತಮವಲ್ಲವೇ, ಬಡ ಹಿಂದು ಮಕ್ಕಳು ಇದರಿಂದ ಪ್ರಯೋಜನ ಪಡೆದುಕೊಂಡರೆ ಒಳ್ಳೆಯದೇ ಅಲ್ಲವೇ..?ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಹೇಳಿದ್ದಾರೆ.
“ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ” ಎನ್ನುವ ಆಕರ್ಷಕ ಪದಪುಂಜಗಳ ಸ್ಲೋಗನ್ ಹೇಳುವ ಆರ್.ಎಸ್.ಎಸ್ ಸಂಘಟನೆ ಪ್ರೇರಿತ ಶಾಲೆಗಳಲ್ಲಿ ಹಿಂದುಗಳಿಂದ ದುಬಾರಿ ಶುಲ್ಕವನ್ನು ಯಾಕೆ ಪಡೆಯಲಾಗುತ್ತಿದೆ..? ನಾವು ಆಂಗ್ಲ ಸಂಸ್ಕೃತಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತೇವೆ ಎನ್ನುವರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಿಸಮಾನವಾಗಿ ಶಿಕ್ಷಣವನ್ನು ನೀಡಿದರೆ ಉಚಿತವಾಗಿ ಶಿಕ್ಷಣವನ್ನು ನೀಡಿದರೆ ಆಗ ಆಂಗ್ಲ ಮಾಧ್ಯಮ ಶಾಲೆಗಳಿಗೆ ಒಂದು ಪಾಠ ಕಲಿಸಿದಂತೆ ಆಗುವುದಿಲ್ಲವೆ..?
ಅದಿರಲಿ ಅದು ಅವರಿಗೆ ಬಿಟ್ಟ ವಿಚಾರ, ಆದರೆ ಪ್ರಸಾದ್ ರಾಜ್ ಕಾಂಚನ್ ಅವರ ಹೇಳಿಕೆಯಿಂದ ಬಿಜೆಪಿ ಬುಡಕ್ಕೆ ಅಕ್ಷರಶಃ ಬೆಂಕಿ ಬಿದ್ದಂತಾಗಿದೆ ಎನ್ನಲು ಆ ಪಕ್ಷದ ನಾಯಕರು ನೀಡಿದ ಹೇಳಿಕೆಯೆ ಸಾಕ್ಷಿ, ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಮಾಡಿದ ಪ್ರಸಾದ್ ರಾಜ್ ಕಾಂಚನ್ ಅವರನ್ನು ಹಿಂದೂ ಸಮಾಜದ ಕಾರ್ಯಕ್ರಮಗಳಿಂದ ಬಹಿಷ್ಕಾರ ಮಾಡುತ್ತೇವೆ ಎನ್ನುವ ಬೆದರಿಕೆಯನ್ನು ಬಿಜೆಪಿ ಒಡ್ಡಿದೆ.
ಪ್ರಶ್ನೆ ಮಾಡುವುದೇ ತಪ್ಪು, ಪ್ರಶ್ನೆ ಮಾಡುವವರನ್ನು ನಾವು ಸಮಾಜದಿಂದ ಬಹಿಷ್ಕಾರ ಮಾಡುತ್ತೇವೆ ಎನ್ನಲು ಭಾರತದಲ್ಲಿ ರಾಜಾಡಳಿತ ಇಲ್ಲ, ಸರ್ವಾಧಿಕಾರ ಇಲ್ಲ, ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನ ಒಳಗೆ ಪ್ರಶ್ನೆಯನ್ನು ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆ ಹಕ್ಕಿನ ಮೂಲಕವೇ ಪ್ರಸಾದ್ ಕಾಂಚನ್ ಪ್ರಶ್ನೆಯನ್ನು ಮಾಡಿದ್ದಾರೆ.
ಹಿಂದುತ್ವ ಮಾತನಾಡುವ ನಿಮ್ಮವರ ಒಡೆತನದ ಶಾಲೆಯಲ್ಲಿ ಹಿಂದುಗಳಿಗೆ ಉಚಿತವಾಗಿ ಶಿಕ್ಷಣ ನೀಡಿ ಎನ್ನುವುದು ಸಮಾಜಘಾತಕ ಪ್ರಶ್ನೆಯೆ..? ಹಿಂದುಗಳಿಗೆ ಉಚಿತ ಶಿಕ್ಷಣ ನೀಡಿ ಎಂದ ನಾಯಕನನ್ನು ಹಿಂದೂ ಸಮಾಜದಿಂದ ಬಹಿಷ್ಕಾರ ಮಾಡುತ್ತೇವೆ ಎನ್ನುವ ಬೆದರಿಕೆಯೊಡ್ಡುತ್ತೀರಾ…? ಬಿಜೆಪಿ ನಾಯಕರು ತಮ್ಮನ್ನು ತಾವು ಉಡುಪಿ ಜಿಲ್ಲೆಯ ಪಾಳೆಗಾರರು ಅಂದುಕೊಂಡಿದ್ದೀರಾ..?
ಕಾಂಗ್ರೆಸ್ ನಾಯಕರನ್ನು ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಬಹಿಷ್ಕಾರ ಮಾಡುತ್ತೇವೆ ಎನ್ನುವ ಬಿಜೆಪಿ ನಾಯಕರುಗಳು ಕಾಂಗ್ರೆಸ್ ನಾಯಕರಿಂದ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆಯನ್ನು ಪಡೆಯುವುದಿಲ್ಲ ಎಂದು ಘೋಷಿಸುವ ಧೈರ್ಯ ಇದೆಯೆ..?
ಮನುವಾದಿ ಸಂಘಟನೆಗಳಿಂದ ಹುಟ್ಟಿಕೊಂಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯು ಭಾರತದಲ್ಲಿ ಸಂವಿಧಾನದ ಬದಲಿಗೆ ಮನವಾದವನ್ನು ಅಳವಡಿಸಲು ಹೊರಟಿರುವ ಸ್ಪಷ್ಟ ಮುನ್ಸೂಚನೆಯೇ ಮೊಗವೀರ ಸಮುದಾಯದ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಅವರನ್ನು ಹಿಂದು ಧಾರ್ಮಿಕ ಕಾರ್ಯಕ್ರಮಗಳಿಂದ ಬಹಿಷ್ಕಾರದ ಬೆದರಿಕೆ.
ಬಡವರ ಮಕ್ಕಳು ಶಿಕ್ಷಣವನ್ನು ಪಡೆಯುವುದನ್ನು, ಸಮಾನ ಹಕ್ಕನ್ನು ಹೊಂದುವುದನ್ನು ಮನುವಾದಿಗಳು ಸತತವಾಗಿ ವಿರೋಧಿಸುತ್ತಾ ಬಂದಿದ್ದಾರೆ, ಅಂತಾದ್ರಲ್ಲಿ ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಿ ಎಂದರೆ ಮನವಾದಿ ಪಕ್ಷ ಬಿಜೆಪಿಗೆ ಕಣ್ಣು ಕೆಂಪಾಗುವುದಿಲ್ಲವೇ..?
ಇನ್ನು ಒಬಿಸಿ ಹಿಂದುಳಿದ ವರ್ಗಗಳಲ್ಲಿ ಗುರುತಿಸಲ್ಪಡುವ ಮೊಗವೀರ ಸಮುದಾಯದವರಾಗಿರುವ ಪ್ರಸಾದ್ ರಾಜ್ ಕಾಂಚನ್ ಅವರನ್ನು ಹಿಂದು ಧಾರ್ಮಿಕ ಕಾರ್ಯಕ್ರಮಗಳಿಂದ ಬಹಿಷ್ಕರಿಸುವ ಬೆದರಿಕೆ ನೀಡಿರುವುದು ಇದು ಹಿಂದುಳಿದ ವರ್ಗಗಳನ್ನು ಶಾಶ್ವತವಾಗಿ ಸಮಾಜದಿಂದ ಬಹಿಷ್ಕರಿಸುವ ಬೆದರಿಕೆಯಾಗಿದೆ. ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬಹಿಷ್ಕರಿಸುವ ಮನುವಾದಿ ಸಿದ್ಧಾಂತದ ಬಿಜೆಪಿಯ ಕನಸು ಭಾರತದಲ್ಲಿ ಎಂದಿಗೂ ನನಸಾಗುವುದಿಲ್ಲ.
ಬಡ ಹಿಂದೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಎಂದು ಕರೆ ನೀಡಿದ ಪ್ರಸಾದ್ ರಾಜ್ ಕಾಂಚನ್ ಅವರೊಂದಿಗೆ ಉಡುಪಿಯ ಪ್ರಜ್ಞಾವಂತ ಜನರು ಖಂಡಿತ ನಿಲ್ಲಲಿದ್ದಾರೆ ಎಂದು ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.





