ಪ್ರಸಾದ್ ಕಾಂಚನ್ ಬಹಿರಂಗ ಕ್ಷಮೆಯಾಚಿಸದಿದ್ದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬಹಿಷ್ಕಾರ: ಹಿಂದೂ ಯುವ ಸೇನೆ ಎಚ್ಚರಿಕೆ

ಉಡುಪಿ: ಒಂದು ಶತಮಾನದಿಂದ ರಾಷ್ಟ್ರೀಯವಾದಿ ಚಿಂತನೆಯ ಮೂಲಕ ಯುವ ಜನತೆಯಲ್ಲಿ ದೇಶಾಭಿಮಾನ ಮೂಡಿಸಿ ರಾಷ್ಟ್ರ ನಿರ್ಮಾಣದ ಮಹತ್ವದ ಸೇವೆ ನೀಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿರುವ ಪ್ರಸಾದ್ ಕಾಂಚನ್ ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು.ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಸಾದ್ ಕಾಂಚನ್‌ರವರಿಗೆ ಬಹಿಷ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ಅಧ್ಯಕ್ಷ ಅಜಿತ್ ಕೊಡವೂರು ಎಚ್ಚರಿಕೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆ ಮಾಡುವ ನಿಟ್ಟಿನಲ್ಲಿ ಆರ್ ಎಸ್ ಎಸ್ ಹಾಗೂ ರಾಷ್ಟ್ರೋತ್ಥಾನ ಶಾಲೆಯ ಬಗ್ಗೆ ಹತಾಶ ಹೇಳಿಕೆ ನೀಡುವ ಪ್ರಸಾದ್ ಕಾಂಚನ್ ತಾಕತ್ತಿದ್ದರೆ ಹಿಂದೂಯೇತರ ಶಾಲಾ ಕಾಲೇಜುಗಳಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಕೇಳುವ ಧೈರ್ಯ ಇದೆಯೇ?

ಪ್ರಸಾದ್ ಕಾಂಚನ್ ನಿರಂತರವಾಗಿ ಹಿಂದೂತ್ವ, ರಾಷ್ಟ್ರೀಯತೆ ವಿಚಾರದಲ್ಲಿ ರಾಜಕೀಯ ತೆವಲಿಗೆ ಬಾಲಿಶ ಹೇಳಿಕೆ ನೀಡುತ್ತಿದ್ದು, ಈ ಹಿಂದೆ ಕೂಡ ತುಳುನಾಡಿನ ದೈವಾರಾಧನೆಯ ಸಾಂಪ್ರದಾಯಿಕ ಕೋಳಿ ಅಂಕದ ಬಗ್ಗೆಯೂ ಅವಮಾನ ಮಾಡಿದ್ದರು. ಇಂತಹ ಹಿಂದೂ ವಿರೋಧಿ ಮನಸ್ಥಿತಿಯ ವ್ಯಕ್ತಿಯನ್ನು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮುನ್ನ ಹಿಂದೂ ಸಮಾಜ ಪುನರ್ ವಿಮರ್ಶೆ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ.

ಪ್ರಸಾದ್ ಕಾಂಚನ್ ನಂತಹ ವ್ಯಕ್ತಿಗಳು ಕೇವಲ ರಾಜಕೀಯ ಉದ್ದೇಶಕ್ಕಾಗಿ ದೇವಸ್ಥಾನಗಳಲ್ಲಿ ಯಾಗವನ್ನು ನಡೆಸುವ ಮೂಲಕ ಹಿಂದೂ ಸಮಾಜವನ್ನು ಮರಳು ಮಾಡಲು ಮುಂದಾಗಿದ್ದು, ಇಂತಹ ಹಿಂದೂ ವಿರೋಧಿಗಳ ಬಗ್ಗೆ ತಕ್ಕ ಉತ್ತರ ನೀಡಬೇಕಿದೆ.

ಕಾಂಗ್ರೆಸ್ ಪಕ್ಷದ ಹಿಂದೂ ನಾಯಕರು ಪ್ರಸಾದ್ ಕಾಂಚನ್ ಹೇಳಿಕೆಯನ್ನು ಸಮರ್ಥಿಸುವರೇ ಎಂಬುದನ್ನು ಸ್ಪಷ್ಟ ಪಡಿಸಬೇಕು. ಪ್ರಸಾದ್ ಕಾಂಚನ್ ತಕ್ಷಣ ಕ್ಷಮೆಯಾಚಿಸದಿದ್ದಲ್ಲಿ ಸಮಸ್ತ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!