ಉಡುಪಿ: ಎನ್.ಎಚ್.ನಾಗೂರ ಅವರ ಕೃತಿಗಳ ಲೋಕರ್ಪಣೆ
ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸೃಜನಶೀಲತೆ, ಮನೋಪಲ್ಲಟ, ನಾಯಕತ್ವ ಮತ್ತು ಪ್ರೇರಣೆ ಈ ನಾಲ್ಕು ಗುಣಗಳು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿರಬೇಕು ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಸಲಹೆ ನೀಡಿದರು.
ಶನಿವಾರ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಅವರು ರಚಿಸಿದ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪುಸ್ತಕದ ಬಗ್ಗೆ ವಿಮರ್ಶಿಸಿದ ಅವರು, ಡಿಡಿಪಿಐ ಎನ್.ಎಚ್. ನಾಗೂರ ಅವರು ಆಡಳಿತ ಜಂಜಡಗಳ ನಡುವೆಯೂ ಸಾಹಿತ್ಯ ಚಟುವಟಿಕೆಗೆ ಸಮಯ ಮೀಸಲಿಟ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು, ಆಡಳಿತ ವ್ಯವಸ್ಥೆ ಅಧಿಕಾರಿ ವರ್ಗಕ್ಕೆ ಮಾದರಿ. ಇವರ ಕೃತಿಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಅತ್ಯಮೂಲ್ಯ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಶಿಕ್ಷಣಸಿರಿ ಪುಸ್ತಕ ಉತ್ತಮ ಶೈಕ್ಷಣಿಕ ಕೈಪಿಡಿಯಾಗಿದೆ ಎಂದು ವಿಷ್ಲೇಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಬಗ್ಗೆ ಶಿಕ್ಷಕರು ಹೆಚ್ಚು ಒತ್ತು ನೀಡಬೇಕಿದೆ. ಕರೊನಾ ನಮಗೆ ಸಾಕಷ್ಟು ಪಾಠವನ್ನು ಕಲಿಸಿದ್ದು, ಮಕ್ಕಳಿಗೆ ಆರೋಗ್ಯ, ಸ್ವಚ್ಛತೆ ಸಂಬಂಧಿತ ವಿಚಾರಗಳ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟು, ಡಿಡಿಪಿಐ ಎನ್.ಎಚ್. ನಾಗೂರ ಅವರ ಸಾಹಿತ್ಯ ಚಟಿವಟಿಕೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಖಿಲ ಭಾರತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್ ಪ್ರಕಾಶ್, ನಿವೃತ್ತ ಉಪ ನಿರ್ದೇಶಕ ಶಂಕರ ಖಾರ್ವಿ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಚ್ ನಾಗೂರ ಪ್ರಸ್ತಾವಿಸಿದರು. ಮುಖ್ಯೋಪಧ್ಯಾಯ ರವೀಂದ್ರ ಹೆಗ್ಡೆ ವಂದಿಸಿದರು, ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ ಸ್ವಾಗತಿಸಿದರು.