ರೈತರ ಪ್ರತಿಭಟನೆ: ಐಎಎಸ್, ಐಪಿಎಸ್ ಸೇರಿದಂತೆ 28 ನಿವೃತ್ತ ಅಧಿಕಾರಿಗಳ ಬೆಂಬಲ

ದೆಹಲಿ: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿರುವ ಕ್ರಮವನ್ನು ಐಎಎಸ್, ಐಪಿಎಸ್ ಸೇರಿದಂತೆ 28 ಮಂದಿ ನಿವೃತ್ತ ಅಧಿಕಾರಿಗಳು ಖಂಡಿಸಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ನಿವೃತ್ತ ಅಧಿಕಾರಿಗಳು, ಸಂಸತ್‌ನ ಎರಡೂ ಸದನಗಳಲ್ಲೂ ಯಾವುದೇ ಚರ್ಚೆಗೆ ಎಡೆಮಾಡಿಕೊಡದೆ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಭಾರತ ಸರ್ಕಾರ ಸಂವಿಧಾನದ ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕೆಂದು ಸಂಸತ್ತಿನಲ್ಲಿ ಯಾವುದೇ ಪಕ್ಷದ ಸದಸ್ಯರು ಒತ್ತಡ ಹೇರಲಿಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಮಸೂದೆಗಳ ಕುರಿತು ಚರ್ಚೆ-ಸಂವಾದ ನಡೆಸಲಿಲ್ಲ. ಇದರ ಜೊತೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದುಕೊಳ್ಳಲಿಲ್ಲ. ಹೀಗಿರುವಾಗ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಸಂಸತ್‌ನಲ್ಲಿ ಯಾವುದೇ ಪ್ರತಿಪಕ್ಷ ಕೃಷಿ ಕಾಯ್ದೆಗಳನ್ನು ಸಂಪೂರ್ಣ ಬದಲಾವಣೆ ಮಾಡಬೇಕೆಂದು ಆಗ್ರಹ ಮಾಡಲಿಲ್ಲ. ಆದರೂ ಕೃಷಿ ಕಾಯ್ದೆಗಳನ್ನು ಸಂಪೂರ್ಣ ಬದಲಾವಣೆ ಮಾಡಿದ್ದು ಏಕೆ….? ಎಂದು ಪತ್ರದಲ್ಲಿ ಪ್ರಶ್ನಿಸಿರುವ ನಿವೃತ್ತ ಅಧಿಕಾರಿಗಳು, ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಯ ತತ್ವಗಳ ಮೇಲಿನ ಹಲ್ಲೆಯಾಗಿದೆ. ಕೃಷಿ ರಾಜ್ಯ ಪಟ್ಟಿಯಲ್ಲಿದ್ದರೂ ಕೇಂದ್ರ ತಾನೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಬಹಿರಂಗ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕೇಂದ್ರ ಸರ್ಕಾರ ಇಂತಹ ತೀರ್ಮಾನ ಕೈಗೊಳ್ಳದಿದ್ದರೆ ರೈತರು ಬೀದಿಗೆ ಬರುತ್ತಿರಲಿಲ್ಲ. ಪ್ರತಿಭಟನೆಗೆ ಇಳಿಯುತ್ತಿರಲಿಲ್ಲ. ಕೊರೊನಾ ಸನ್ನಿವೇಶವನ್ನು ದುರುಪಯೋಗ ಮಾಡಿಕೊಂಡು ರೈತರು ಪ್ರತಿಭಟನೆಗೆ ಹೋಗುವುದಿಲ್ಲ. ಹೆಚ್ಚು ಜನರು ಸೇರಲು ಅವಕಾಶ ಇರುವುದಿಲ್ಲ ಎಂಬುದನ್ನು ಖಚಿತ ಮಾಡಿಕೊಂಡ ಸರ್ಕಾರ ಇಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ನಾವು ಕಾಯ್ದೆಗಳ ಸರಿ-ತಪ್ಪುಗಳ ಕುರಿತು ಚರ್ಚೆ ಮಾಡಲು ಹೋಗುವುದಿಲ್ಲ. ಸಂವಿಧಾನದ ಆಶಯಗಳಂತೆ ನಡೆಯಬೇಕು ಎಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಯಾವುದೇ ಮಸೂದೆ ಮಂಡನೆಯಾಗುವ ಮೊದಲು ಸಂಸತ್ತಿನ ಸಮಿತಿಗಳಿಗೆ ಕಳಿಸಬೇಕು. ಆದರೆ ಈ ಕಾಯ್ದೆಗಳ ಅಂಗೀಕಾರಕ್ಕೂ ಮೊದಲು ಸಮಿತಿಗಳಿಗೆ ಕಳಿಸುವುದನ್ನು ನಿರಾಕರಿಸಲಾಗಿದೆ. ಯುಪಿಎ-೧ ಸರ್ಕಾರ ಇದ್ದಾಗ ಶೇ.60 ಮಸೂದೆಗಳನ್ನು ಸಂಸತ್ ಆಯ್ಕೆ ಸಮಿತಿಗೆ ಕಳಿಸಲಾಗಿತ್ತು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಶೇ.71ರಷ್ಟು ಮಸೂದೆಗಳನ್ನು ಆಯ್ಕೆ ಸಮಿತಿಗಳ ಒಪ್ಪಿಗೆಗೆ ಕಳಿಸಲಾಗಿತ್ತು. ಎನ್.ಡಿ.ಎ-1 ಸರ್ಕಾರದ ಅವಧಿಯಲ್ಲಿ ಶೇ. 25ರಷ್ಟು ಮಸೂದೆಗಳು ಮಾತ್ರ ಸಂಸತ್ತಿನ ಸಮಿತಿಗಳ ಒಪ್ಪಿಗೆ ಕಳಿಸಲಾಗಿದೆ.

ಆದರೆ, ಈ ಸರ್ಕಾರದ ಅವಧಿಯಲ್ಲಿ ಚರ್ಚೆ ಮತ್ತು ಸಂವಾದ ನಡೆಸುವುದನ್ನು ನಿರಾಕರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಖಿಲ ಭಾರತ ಮತ್ತು ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ಸೇವೆಯಲ್ಲಿದ್ದ 78 ಮಂದಿ ನಿವೃತ್ತ ಅಧಿಕಾರಿಗಳಾದ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಹಾಗೂ ನೋಂದಣಿ ಮಾಡಿಕೊಲ್ಲದೆ ತಟಸ್ಥರಾಗಿದ್ದೇವೆ. ಪಕ್ಷಪಾತಕ್ಕೆ ನಮ್ಮಲ್ಲಿ ಅವಕಾಶವಿಲ್ಲ. ಆದರೆ ನಾವು ಸಂವಿಧಾನಕ್ಕೆ ಬದ್ದರಾಗಿ ನಡೆದು ಕೊಳ್ಳುವವರಾಗಿದ್ದೇವೆ. ಹಾಗಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ರೈತರು ಸೇರಿ ಯಾರೇ ಆದರೂ ಅವರಿಗೆ ಬೆಂಬಲ ನೀಡುತ್ತೇವೆ. ಈಗಲಾದರೂ ಸರ್ಕಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಸುತ್ತಿರುವ ಪ್ರತಿಭಟಿಸುವ ಹಕ್ಕುಗಳನ್ನು ಗೌರವಿಸಬೇಕು. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ನಿವೃತ್ತ ಅಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!