ಕೊರೊನಾ ಸಮಯದಲ್ಲಿ ಮಾಡಿದಂತೆ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್‌ ಪರೋಕ್ಷ ವಾಗ್ದಾಳಿ

ಬೆಂಗಳೂರು : ಸರಕಾರದ ನಿರ್ಧಾರಗಳು ಹಾಗೂ ಸಾಮಾಜಿಕ ವಿಭಜನೆ ಕುರಿತು ಬಹುಭಾಷಾ ನಟ ಕಿಶೋರ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಒಟ್ಟಿಗೆ ಒಂದು ರಾಷ್ಟ್ರದಂತೆ ಎಂದು ಹೇಳುವ ನೀವು, ದ್ವೇಷದ ವಿಷ ಬಿತ್ತಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಎಂದು ಜನರನ್ನು ಒಡೆದ ನಂತರ ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ ಎಂದು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ

ಇಲ್ಲ. ನಾವು ಭಾರತದ ಜನ ತಯಾರಿಲ್ಲ, ನಿಮ್ಮ ರಾಜಿ, ಶರಣಾಗತಿಯಿಂದಾಗಿ ನಾವು ಇನ್ನೂ ಎಷ್ಟು ಸವಾಲುಗಳನ್ನು ಎದುರಿಸಬೇಕು? ನಿಮ್ಮ ತಪ್ಪುಗಳು, ರಹಸ್ಯಗಳನ್ನು ಮುಚ್ಚಿಡಲು ನಾವಿನ್ನೆಷ್ಟು ಬೆಲೆ ತೆರಬೇಕು ಎಂದು ಅವರು ತಿಳಿಸಿದ್ದಾರೆ.

“ಸಾಮೂಹಿಕ ಕೊಲೆಗಾರರು ಮತ್ತು ಶಿಶುಕಾಮಿಗಳನ್ನು ಅಪ್ಪಿಕೊಂಡು ‘ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ’ ಎಂದು ಘೋಷಿಸುವ ಮೊದಲು ನೀವು ನಮ್ಮನ್ನು ಕೇಳಿದ್ದಿರಾ?” ಎಂದು ಪ್ರಶ್ನಿಸಿದ್ದಾರೆ.

ರಫೇಲ್‌ನಿಂದ ಹಿಡಿದು ಎಪ್ಸ್ಟೀನ್‌ವರೆಗೆ, ನೋಟು ರದ್ದತಿಯಿಂದ ಕೊರೊನಾ ಲಾಕ್‌ಡೌನ್‌ವರೆಗೆ, ಕೃಷಿ ಕಾನೂನುಗಳಿಂದ ಅಗ್ನಿವೀರ್‌ ವರೆಗೆ, ಮಣಿಪುರದಿಂದ ಕಾಶ್ಮೀರ, ಲಡಾಖ್‌ವರೆಗೆ ನಿಮ್ಮ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಮ್ಮನ್ನೋ ಅಥವಾ ನಮ್ಮ ಪ್ರತಿನಿಧಿಗಳನ್ನೋ ಕೇಳಿದ್ದಿರಾ ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮ ರಾಜಿ, ಸರೆಂಡರ್ ಮತ್ತು ಮೂರ್ಖತನದ ಪರಿಣಾಮವಾಗಿ ಬಂದ ಸವಾಲುಗಳನ್ನು ಎದುರಿಸಲು ಈಗ ನಮ್ಮನ್ನು ಕೇಳಲು ನಿಮಗೆ ಯಾವ ಹಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಾಕು, ಕೊರೊನಾ ಸಮಯದಲ್ಲಿ ಮಾಡಿದಂತೆ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ. ಸತ್ತ 50 ಲಕ್ಷ ಜನರನ್ನು ನಿಮ್ಮ ಕಡತಗಳಲ್ಲಿ ಸತ್ತವರೆಂದು ಪರಿಗಣಿಸಲೂ ಯೋಗ್ಯರಲ್ಲದಂತೆ ಮಾಡಿದಿರಿ ಎಂದು ಆರೋಪಿಸಿದ್ದಾರೆ.

ದೇಶದ ಅತ್ಯುನ್ನತ ಸ್ಥಾನವನ್ನು ನಗೆಪಾಟಲಾಗಿಸಲಾಗಿದೆ. ಸರ್ವಾಧಿಕಾರದ ಮತ್ತಿನಲ್ಲಿ ಇರುವ ನೀವು ಅಧಿಕಾರ ಬಿಟ್ಟು ಹೊರಡುವ ಸಮಯ ಬಂದಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!