ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ 193 ವಿಪಕ್ಷ ಸಂಸದರಿಂದ ಆಗ್ರಹ

ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಕೋರಿ ಸುಮಾರು 130 ಲೋಕಸಭಾ ಸದಸ್ಯರು ಹಾಗೂ 63 ರಾಜ್ಯಸಭಾ ಸದಸ್ಯರು ನೋಟಿಸ್ ಗೆ ಸಹಿ ಮಾಡಿದ್ದಾರೆ ಎಂದು ಗುರುವಾರ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಮೂಲಗಳ ಪ್ರಕಾರ, ಈ ನೋಟಿಸ್ ಅನ್ನು ಉಭಯ ಸದನಗಳ ಪೈಕಿ ಕನಿಷ್ಠ ಒಂದು ಸದನದಲ್ಲಿ ಶುಕ್ರವಾರ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಈ ನೋಟಿಸ್ ಅನ್ನು ಯಾವ ಸದನದಲ್ಲಿ ಮೊದಲಿಗೆ ಮಂಡಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ನೋಟಿಸ್ ಗೆ ಸಹಿ ಮಾಡಲು ಸಂಸದರು ಅಸಾಧಾರಣ ಉತ್ಸಾಹ ತೋರಿದ್ದು, ಈಗಾಗಲೇ ಅಗತ್ಯವಿರುವಷ್ಟು ಸಂಖ್ಯೆಯ ಸಂಸದರು ನೋಟಿಸ್ ಗೆ ಸಹಿ ಮಾಡಿದ್ದರೂ, ಗುರುವಾರವೂ ಸಂಸದರು ಈ ನೋಟಿಸ್ ಗೆ ಸಹಿ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ವಿಪಕ್ಷ ನಾಯಕರೊಬ್ಬರು ತಿಳಿಸಿದ್ದಾರೆ.

ನಿಯಮಗಳ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸುವಂತೆ ಕೋರುವ ನೋಟಿಸ್ ಗೆ ಲೋಕಸಭೆಯಲ್ಲಿ ಕನಿಷ್ಠ 100 ಮಂದಿ ಸಂಸದರು ಹಾಗೂ ರಾಜ್ಯಸಭೆಯಲ್ಲಿ ಕನಿಷ್ಠ 50 ಮಂದಿ ಸಂಸದರು ಸಹಿ ಮಾಡಬೇಕಿದೆ.

ಅಧಿಕೃತವಾಗಿ ಇಂಡಿಯಾ ಮೈತ್ರಿಕೂಟದಲ್ಲಿರದಿದ್ದರೂ, ಈ ನೋಟಿಸ್ ಗೆ ಆಪ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳು ಸಹಿ ಮಾಡಿವೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗಾಗಿ ನೋಟಿಸ್ ಮಂಡನೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!