ಆರ್ಟಿಓ ಕಚೇರಿಗೆ ಎಸಿಬಿ ದಾಳಿ: ಹಣವನ್ನು ಕಿಟಕಿಯಿಂದ ಎಸೆದ ಅಧಿಕಾರಿಗಳು
ಬೆಂಗಳೂರು: ಎಸಿಬಿ ಅಧಿಕಾರಿಗಳು ಆರ್ಟಿಒ ಕಚೇರಿ ಮೇಲೆ ದಾಳಿಮಾಡತ್ತಿದ್ದಂತೆ ಕಚೇರಿಯಲ್ಲಿದ್ದ ಹಣವನ್ನು ಕಿಟಕಿಯಿಂದ ಹೊರಗೆ ಎಸೆದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ವಾಹನ ನೋಂದಣಿ, ಚಾಲನಾ ಪರವಾನಗಿ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಕೋರಮಂಗಲದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಕಚೇರಿ ಮೇಲೆ ನಿನ್ನೆ ಸಂಜೆ ದಾಳಿ ನಡೆಸಿದ್ದರು. ಈ ವೇಳೆ ಇತ್ತ ದಾಳಿಯಾಗುತ್ತಿದ್ದಂತೆ ಅತ್ತ ಕಚೇರಿಯಲ್ಲಿದ್ದವರು ಹಣವನ್ನು ಕಿಟಕಿಯಿಂದ ಹೊರಕ್ಕೆ ಎಸೆದಿದ್ದು, ಕಚೇರಿಯಲ್ಲಿ ಸಿಕ್ಕ 5.96ಲಕ್ಷ ನಗದನ್ನು ಅಧಿಕಾರಿಗಳು ವಶಕ್ಕೆ ತಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಾಖಲೆಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಕಚೇರಿ ಪಕ್ಕದ ಖಾಸಗಿ ಅಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಲಂಚದ ಹಣವನ್ನು ಬಚ್ಚಿಟ್ಟಿರುವುದನ್ನು ತನಿಖಾ ತಂಡ ಪತ್ತೆಮಾಡಿದ್ದು, ಆರ್ಟಿಒ ಕಚೇರಿಯಲ್ಲಿದ್ದ ನಾಲ್ವರು ಖಾಸಗಿ ಮಧ್ಯವರ್ತಿಗಳು ಹಾಗೂ ಅಕ್ರಮದಲ್ಲಿ ಶಾಮೀಲಾದ ಶಂಕೆ ಇರುವ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ಬೆಂಗಳೂರು ನಗರ ಘಟಕದ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ನೇತೃತ್ವದಲ್ಲಿನ ಅಧಿಕಾರಿಗಳ ತಂಡ ದಾಳಿ ಮಾಡಿ ಶೋಧ ನಡೆಸಿದ್ದು. ಆರ್ಟಿಒ ಕಚೇರಿ ಇರುವ ಬಿಡಿಎ ಕಾಂಪ್ಲೆಕ್ಸ್ ನಲ್ಲೇ ಇದ್ದ ಖಾಸಗಿ ಮಧ್ಯವರ್ತಿಯೊಬ್ಬನ ಅಂಗಡಿಯಲ್ಲಿ ವಾಹನ ನೋಂದಣಿ, ಚಾಲನಾ ಪರವಾನಗಿಯ ಮೂಲ ದಾಖಲೆಗಳು ಪತ್ತೆಯಾಗಿವೆ. ಇನ್ನು ಅಧಿಕಾರಿಗಳ ದಾಳಿವೇಳೆ ಕಚೇರಿಯಲ್ಲಿದ್ದವರು ಕಿಟಕಿಯಿಂದ ಎಸೆದ ಹಣವನ್ನು ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಹೆಕ್ಕಿಕೊಂಡು ಹೋಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಎಸಿಬಿ ಅಧಿಕಾರಿಗಳು ಕೆಲವರನ್ನು ವಶಕ್ಕೇ ತಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ . |