ಇರಾನ್ ಮತ್ತು ಇಸ್ರೇಲ್ ಯುದ್ಧ: ಹಲವು ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಆದ್ಯತೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದಿಂದ ಹಲವು ದೇಶಗಳಿಗೆ ಸಂಕಷ್ಟ ಎದುರಾಗಿದೆ. ವಿಮಾನ ಸಂಚಾರ ಹಲವು ರದ್ದಾಗಿರುವುದರಿಂದ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡಿಗರ ಸುರಕ್ಷತೆಗೆ ಎಲ್ಲ ರೀತಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ. ದೆಹಲಿ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿ, ಅವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವ ಕಾರಣ ನಾಡಿಗೆ ಮರಳಲು ಸಾಧ್ಯವಾಗದೆ ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಸಹಾಯವಾಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯುದ್ಧಪೀಡಿತ ದೇಶಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆ ನಮ್ಮ‌ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದ್ದಾರೆ.

ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಜಿ ಸಚಿವರಾದ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಅವರ ಸುರಕ್ಷತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!