ಸಾರ್ವಜನಿಕರ ಕಡತಗಳ ದುರುಪಯೋಗಕ್ಕೆ ಕುಮ್ಮಕ್ಕು- ಉಡುಪಿ ಸಬ್‌ರಿಜಿಸ್ಟರ್ ವಿರುದ್ಧ ದೂರು

ಉಡುಪಿ, ಫೆ.28: ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳ ದುರುಪಯೋಗಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಉಪ ನೋಂದಣಾಧಿಕಾರಿ ವಿರುದ್ಧ ಲೋಕಾಯುಕ್ತ ಪೊಲೀಸರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಫೆ.27 ರಂದು ಬನ್ನಂಜೆಯಲ್ಲಿರುವ ಹಿರಿಯ ಉಪನೋಂದಣಾಧಿಕಾರಿ ಅವರ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಈ ವೇಳೆ ಕಚೇರಿಯಲ್ಲಿ ಹೊರಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಕೇಶ್ ಎಂಬಾತ ತಮ್ಮ ವೈಯಕ್ತಿಕ ಬ್ಯಾಗ್‌ನಲ್ಲಿ 8 ಕಡತಗಳನ್ನು ಮತ್ತು ಸುನೀಲ್ ಎಂಬಾತ ತಮ್ಮ ವೈಯಕ್ತಿಕ ಬ್ಯಾಗ್‌ನಲ್ಲಿ 35 ಕಡತಗಳನ್ನು ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

ಇವರು ಸಾರ್ವಜನಿಕರಿಂದ ಆಸ್ತಿ ಮತ್ತು ಮದುವೆ ನೋಂದಣಿಗೆ ಸಂಬಂಧಿಸಿದ 43 ಕಡತಗಳನ್ನು ಕಚೇರಿಯ ಇನ್‌ವರ್ಡ್ ಪುಸ್ತಕದಲ್ಲಿ ನಮೂದಿಸದೇ ಅನಧಿಕೃತವಾಗಿ ತಮ್ಮ ವೈಯಕ್ತಿಕ ಬ್ಯಾಗಿನಲ್ಲಿ ಇಟ್ಟುಕೊಂಡು ಅಪರಾಧಿಕ ದುರ್ನಡತೆ ಮತ್ತು ಕಾನೂನಿನ ದುರುಪಯೋಗ ಮಾಡಿದ್ದಾರೆ ಮತ್ತು ಕಚೇರಿಗೆ ಬಂದ ಸಾರ್ವಜನಿಕರ ಜೊತೆ ಸರಕಾರಿ ನೌಕರರಂತೆ ವರ್ತಿಸಿದ್ದಾರೆ ಎಂದು ದೂರಲಾಗಿದೆ.

ಇಷ್ಟೆಲ್ಲಾ ಕೃತ್ಯಗಳನ್ನು ಆರೋಪಿಗಳು ಮಾಡಿದ್ದರೂ ಕಚೇರಿಯ ಉಪ ನೋಂದಣಾಧಿಕಾರಿ ಗಿರೀಶ್, ಈ ಬಗ್ಗೆ ಗಮನ ಹರಿಸದೆ ಇದ್ದು, ಅವರ ಕುಮ್ಮಕ್ಕಿನಂದಿಲೇ ಸುಕೇಶ್ ಮತ್ತು ಸುನೀಲ್ ಈ ಕೃತ್ಯವನ್ನು ನಡೆಸಿರುವುದು ಕಂಡು ಬಂದಿದೆ ಎಂದು ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ವಿ.ಎಸ್. ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!