ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಹೋರಾಟ: ಗುತ್ತಿಗೆದಾರರ ಸಂಘ ಎಚ್ಚರಿಕೆ
ಬ್ರಹ್ಮಾವರ, ಫೆ.27: ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಸಭೆ ಬ್ರಹ್ಮಾವರದ ಸಿಟಿ ಸೆಂಟರ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಜರಗಿತು.
ಈ ಸಂದರ್ಭದಲ್ಲಿ ಗುತ್ತಿಗೆದಾರರು ಎದುರಿಸುತ್ತಿರುವ ಬಾಕಿ ಪಾವತಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಇದೇ ವೇಳೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಗೋಕುಲ್ ಶೆಟ್ಟಿ ಹಾಗೂ ಉಪಾಧ್ಯಕ್ಷರು ಸೇರಿದಂತೆ ಇತರೆ ಪದಾಧಿಕಾರಿ ಗಳನ್ನು ಹೊಸದಾಗಿ ನೇಮಕ ಮಾಡಲಾಯಿತು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು 37,000 ಕೋಟಿ ರೂ. ಅಧಿಕ ಬಾಕಿ ಬಿಲ್‌ಗಳು ಪಾವತಿಯಾಗದೆ ಉಳಿದಿರುವುದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ, ಕಾರ್ಮಿಕರ ವೇತನ, ಯಂತ್ರೋಪಕರಣಗಳ ನಿರ್ವಹಣೆ ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಗುತ್ತಿಗೆದಾರರ ಮೇಲೆ ಭಾರಿ ಆರ್ಥಿಕ ಒತ್ತಡ ಉಂಟುಮಾಡಿದೆ ಎಂದು ಸಭೆಯಲ್ಲಿ ವಿಚಾರ ವಿನಿಯಯ ಮಂಡಿಸಲಾಯಿತು.
ಗುತ್ತಿಗೆದಾರರು ಸರಕಾರದ ಅಭಿವೃದ್ಧಿ ಕಾರ್ಯಗಳ ಪ್ರಮುಖ ಭಾಗೀದಾರರು. ಅವರ ಆರ್ಥಿಕ ಸಂಕಷ್ಟ ನಿವಾರಣೆಗೆ, ಬಾಕಿ ಪಾವತಿಗಳಿಗಾಗಿ ಸರಕಾರವು ವಿಶೇಷ ಸಹಾಯ ಪ್ಯಾಕೇಜ್ ಘೋಷಿಸಿ, ಎಲ್ಲಾ ಬಾಕಿ ಬಿಲ್‌ಗಳನ್ನು ಮಾ.31 ರೊಳಗೆ ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಜವಾಬ್ದಾರಿಯುತವಾಗಿ ಆಗ್ರಹಿಸಲಾಯಿತು.
ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಿ, ಶೀಘ್ರದಲ್ಲೇ ಪಾದಯಾತ್ರೆ ಮೂಲಕ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು. ಮಾ.6ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು.
ಸರಕಾರವು ತಕ್ಷಣ ಬಾಕಿ ಪಾವತಿಗಳನ್ನು ಬಿಡುಗಡೆ ಮಾಡುವ ಕ್ರಮ ಕೈಗೊಂಡು, ಗುತ್ತಿಗೆದಾರರ ಆರ್ಥಿಕ ಸಂಕಷ್ಟಕ್ಕೆ ತುರ್ತು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಯಿತು. ಸರಕಾರ ಶೀಘ್ರ ಕ್ರಮ ಕೈಗೊಳ್ಳ ದಿದ್ದರೆ, ಗುತ್ತಿಗೆದಾರರ ಹಕ್ಕುಗಳ ರಕ್ಷಣೆಗೆ ಹಂತ ಹಂತವಾಗಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿತು.
ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಗೋಕುಲ ಶೆಟ್ಟಿ ಬೈಂದೂರು, ಮಾಜಿ ಅಧ್ಯಕ್ಷ ವಾದಿರಾಜ್ ಶೆಟ್ಟಿ ಹೆಬ್ರಿ, ಪ್ರಮುಖರಾದ ಪವನ್ ಗೌಡ, ಎ.ಬಿ.ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಚೇರ್ಕಾಡಿ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.





