ಯುವವಾಹಿನಿ ಉಡುಪಿ ಘಟಕ: ಫೆ.28ರಂದು ರಜತ ಸಂಭ್ರಮ ಸಮಾರೋಪ-‘ಯುವ ಸಂಗಮ‌’ ಸಾಂಸ್ಕೃತಿಕ ಸ್ಪರ್ಧೆ, ಮಾ.1ಕ್ಕೆ ಯುವ ಬಿಲ್ಲವ ಸಮಾವೇಶ

ಉಡುಪಿ: ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮದ ಸಮಾರೋಪ ಸಮಾರಂಭವು ಇದೇ ಫೆ.28 ಮತ್ತು ಮಾರ್ಚ್ 1ರಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ದಯಾನಂದ ಕರ್ಕೇರ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಜತ ಸಂಭ್ರಮದ ಸವಿ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಯುವ ಸ್ಪಂದನಾ, ಯುವ ಪ್ರೇರಣಾ, ಗುರು ಸನ್ಮತಿ, ಅಸಹಾಯಕ ಕುಟುಂಬಕ್ಕೆ ತಲೆಗೊಂದು ಸೂರಿನ ಯೋಜನೆಯಾದ ಮನೆ ನಿರ್ಮಾಣ, ವಿದ್ಯಾರ್ಥಿ ವೇತನದ ವಿದ್ಯಾನಿಧಿ, ವಿವಿಧ ಕಾರ್ಯಾಗಾರ, ತರಬೇತಿ ಕಾರ್ಯಕ್ರಮ ಸಹಿತ 25 ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ‌ ಎಂದರು.

ಫೆ.28ರಂದು ಉಡುಪಿ ಜಿಲ್ಲೆಯ ವಿವಿಧ ಬಿಲ್ಲವ ಸಂಘಗಳಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಯುವ ಸಂಗಮ’ ನಡೆಯಲಿದ್ದು, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌‌ ಉದ್ಘಾಟನೆ ಮಾಡಲಿದ್ದಾರೆ. ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಹೇಳಿದರು. ಮಾ.1ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ‘ಯುವ ಸದ್ಭಾವನ’ ಯುವ ಬಿಲ್ಲವ ಸಮಾವೇಶ ಕಾರ್ಯಕ್ರಮವನ್ನು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಎಚ್ ಕೆ.ಕೃಷ್ಣ ಮೂರ್ತಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದ ಸಾಧಕರಾದ ರಾಮಚಂದ್ರ ಮಾಬಿಯಾನ್, ಪ್ರಕಾಶ್ ಕರ್ಕೇರ, ಪ್ರಭಾಕರ ಪೂಜಾರಿ, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ. ಸುನೀತಾ ವಿ ಅವರಿಗೆ ರಜತ ರತ್ನ ಗೌರವಾರ್ಪಣೆ ನಡೆಯಲಿದೆ. ಬಳಿಕ ಗುರು ಸನ್ಮತಿ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಬಳಿಕ ಯುವವಾಹಿನಿ ಸದಸ್ಯರಿಂದ “ಯುವವೈವಿಧ್ಯ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಮಧ್ಯಾಹ್ನ 2.30ಕ್ಕೆ “ಯುವ ಸಿರಿ” ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ರಾಕೇಶ್ ಕಟಪಾಡಿ ನಿರ್ದೇಶನದಲ್ಲಿ ಯುವವಾಹಿನಿ ಸದಸ್ಯರಿಂದ “ಮಣ್ಣದೈಸಿರ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಬಳಿಕ ರವಿ ಕುಮಾರ್ ಕಡೆಕಾರ್ ನಿರ್ದೇಶನದಲ್ಲಿ ಕೋಟಿ ಚೆನ್ನಯ್ಯರ ಜೀವನಾಧರಿತ ‘ಸತ್ಯೋದ ಬೊಳ್ಳಿಲು” ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಜತ ಸಂಭ್ರಮದ ಸಂಚಾಲಕ ರಘುನಾಥ್ ಮಾಬಿಯಾನ್, ಕೇಂದ್ರ ಸಮಿತಿಯ‌ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಸಮಿತಿಯ ಸ್ಥಾಪಕ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಾಜಿ ಅಧ್ಯಕ್ಷ ನಾರಾಯಣ ಬಿ.ಎಸ್. ಇದ್ದರು.

Leave a Reply

Your email address will not be published. Required fields are marked *

error: Content is protected !!