ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷ ನೇತ್ರತಜ್ಞ ಡಾ.ಕೃಷ್ಣ ಪ್ರಸಾದ್ ಕೂಡ್ಲು ಸಮ್ಮಾನ

ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಆಯೋಜಿಸಿದ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು ಅವರನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಸಮ್ಮಾನಿಸಿದರು.

ಅನಂತರ ಶ್ರೀಪಾದರು ಆಶೀರ್ವಚನ ನೀಡಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹೋರಾಡುತ್ತಿರುವ, “ಜನ ಸೇವೆಯೇ ನನ್ನ ಉಸಿರು’ ಎನ್ನುವ ರೀತಿಯಲ್ಲಿ 25 ವರ್ಷಗಳಿಂದ ರಾಜ್ಯಾದ್ಯಂತ ನಿರಂತರವಾಗಿ ನೇತ್ರ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ನಡಕಗಳನ್ನು ವಿತರಣೆ ಮಾಡುತ್ತಾ ಸಮಾಜಮುಖೀ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿರುವ ಡಾ| ಕೃಷ್ಣಪ್ರಸಾದರು ಮಾದರಿ ವೈದ್ಯರಾಗಿ ಗುರುತಿಕೊಂಡಿದ್ದಾರೆ. ದೇವರು ಮೆಚ್ಚುವ ಕಾರ್ಯ ಮಾಡುತ್ತಿರುವ ಅವರ ಎಲ್ಲ ಯೋಚನೆ-ಯೋಜನೆಗಳು ಯಶಸ್ವಿಯಾಗಲಿ ಎಂದು ಹರಸಿದರು.

ಶ್ರೀಲಕ್ಷೇಶ್ವರ ಗೋನಾಳದ ರಮೇಶ ಮಹಾಸ್ವಾಮಿ, ಕನ್ನಡ ಭವನ ನಿರ್ದೇಶಕ ಡಾ|ಕೆ.ಎನ್‌. ವೆಂಕಟ್ರಮಣ ಹೊಳ್ಳ, ಕನ್ನಡ ಚು.ಸಾ.ಪ. ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಡಾಕೊಳ್ಚಪ್ಪೆ ಗೋವಿಂದ ಭಟ್‌, ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕನ್ನಡ ಕಟ್ಟಾಳು ನಂ. ವಿಜಿ ಕುಮಾರ್‌, ಸಾಹಿತಿ ಡಾ|ಸುರೇಶ್‌ ನೆಗಳೆಗುಳಿ, ಚು.ಸಾ.ಪ. ದ.ಕ.ಜಿಲ್ಲೆ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷ ಡಾ| ಸಂ.ವೆಂ. ತಮ್ಮನ ಗೌಡ ಲಕ್ಷೇಶ್ವರ, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ಸಾಹಿತಿ ಜಯಾನಂದ ಪೆರಾಜೆ, ಸಾಹಿತಿ ಡಾ|ಶಾಂತಾ ಪುತ್ತೂರು, ದ.ಕ.ಜಿಲ್ಲಾ ಕನ್ನಡ ಚು.ಸಾ.ಪ. ಗೌರವಾಧ್ಯಕ್ಷೆ ಸತ್ಯವತಿ ಭಟ್‌ ಕೊಳಚಪ್ಪು, ಕೊಡಗು ಜಿಲ್ಲಾ ಚು.ಸಾ.ಪ. ಅಧ್ಯಕ್ಷೆ ರುಬಿನಾ ಎಂ.ಎ., ಸಂಘಟಕ ಪಿ.ವಿ. ಪ್ರದೀಪ್‌ ಕುಮಾರ್‌, ಲೇಖಕಿ ರೇಖಾ ಸುಧೇಶ್‌ ರಾವ್‌, ಸಂಘಟನ ಕಾರ್ಯದರ್ಶಿ ಶಾರದಾ ಮೊಳೆಯಾರ್‌, ಕನ್ನಡ ಭವನ ಸಂಸ್ಥಾಪಕ ಡಾ| ವಾಮನ್‌ ರಾವ್‌ ಬೇಕಲ್‌, ವಿರಾಜ್‌ ಅಡೂರು ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನ ಆರಂಭದ ಮೊದಲು ನಗರದ ಶ್ರೀ ಧೂಮಾವತಿ ದೈವಸ್ಥಾನ ಪರಿಸರದಿಂದ ಸರ್ವಾಧ್ಯಕ್ಷರ ಮೆರವಣಿಗೆ ಆಕರ್ಷಕವಾಗಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!