ಪತ್ರಿಕೆಯ ಫೇಸ್‌ಬುಕ್ ಪೇಜ್‌ನಲ್ಲಿ ಅವಾಚ್ಯ ಕಮೆಂಟ್: ಆರೋಪಿಯ ಬಂಧನ
ಉಡುಪಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ಕಾಮೆಂಟ್ ಮಾಡಿದ ಆರೋಪದಲ್ಲಿ ಬೆಂಗಳೂರಿನ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರು ಮತ್ತಿಕೆರೆ ನಿವಾಸಿ ಪ್ರಕಾಶ್ ಎಸ್ (45) ಎಂದು ಗುರುತಿಸಲಾಗಿದೆ.
2025 ಮಾರ್ಚ್ 4ರಂದು ಸಂಜೆ 4.30ಕ್ಕೆ ಪತ್ರಿಕೆಯೊಂದರ ಫೇಸ್‌ಬುಕ್ ಪುಟದಲ್ಲಿ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ತರಕಾರಿ ವ್ಯಾಪಾರ ನಡೆಸುವ ಮುಹಮ್ಮದ್ ಅವರ ಸಂದರ್ಶನದ ಕುರಿತು ಪ್ರಕಟವಾದ ‘ರಂಜಾನ್ ಕಥೆಯ ಇಂದಿನ ಹೀರೋ ಮಂಗಳೂರಿನ ಮುಹಮ್ಮದ್’ ಎಂಬ ಪೋಸ್ಟ್ ‘ಹೆಮ್ಮೆಯ ಕಾರ್ಯಕರ್ತ’ ಎಂಬ ಹೆಸರಿನ ಖಾತೆಯಿಂದ ಅವಾಚ್ಯ ಕಾಮೆಂಟ್ ಮಾಡಲಾಗಿದೆ ಎನ್ನಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2025ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 353(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) 66(ಸಿ)ರಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಠಾಣೆ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಪಿಎಸ್ಐ ನಂಜಾನಾಯ್ಕ್ ಎನ್. (ಕಾನೂನು ಮತ್ತು ಸುವ್ಯವಸ್ಥೆ), ಪಿಎಸ್ಐ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿ ಸಂತೋಷ, ಮೋಹನ್, ಸಂತೋಷ ದೇವಾಡಿಗ, ಘನಶ್ಯಾಮ, ಅಣ್ಣಪ್ಪ, ಮಹಾಬಲ ಶೆಟ್ಟಿಗಾರ, ನಾಗಶ್ರೀ ಮತ್ತು ಗೌತಮ ಅವರ ತಂಡ ಕಾರ್ಯಾಚರಣೆ ನಡೆಸಿತು.
ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





