ಅಸಂಘಟಿತ ಕಾರ್ಮಿಕರ ಶೋಷಣೆ ತಡೆಯಲು ಕಾನೂನು : ನ್ಯಾ.ಎಂ.ಐ.ಅರುಣ್

ಉಡುಪಿ, ಫೆ.8: ದೇಶ ಅಭಿವೃದ್ಧಿಗೆ ಉದ್ಯಮಿಗಳು ಮಾತ್ರವಲ್ಲ ಕಾರ್ಮಿಕರು ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡು ತ್ತಾರೆ. ಆದುದರಿಂದ ಅವರಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಹೆಚ್ಚು ಶೋಷಣೆ ಒಳಗಾಗುತ್ತಿರುವ ಅಸಂಘಟಿತ ಕಾರ್ಮಿಕರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ರೂಪಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಹಾಗೂ ಉಡುಪಿ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸ್ವದೇಶ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಅಸಂಘಟಿತ ಕಾರ್ಮಿಕರಾದ ಚಿನ್ನ-ಬೆಳ್ಳಿ ಆಭರಣ ತಯಾರಿಕಾ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಮತ್ತು ಯೋಜನೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ರೂಪಿಸಿವೆ. ಸಮಾಜವು ಸಮಾತೋಲನದ ಬೆಳವಣಿಗೆ ಹೊಂದಬೇಕು ಮತ್ತು ಯಾರು ಕೂಡ ಶೋಷಿತರಾಗಬಾರದು ಹಾಗೂ ಪ್ರತಿಯೊಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ ವಿಕನಸಗೊಳಿಸಬೇಕೆಂಬ ದೃಷ್ಟಿಯಿಂದ ಈ ಎಲ್ಲ ಕಾನೂನು ರಚನೆ ಮಾಡಲಾಗಿದೆ ಎಂದರು.

ಕನಿಷ್ಠ ವೇತನ, ಬಾಲ ಕಾರ್ಮಿಕರ ಪದ್ಧತಿ, ಪಿಂಚಣಿ ಯೋಜನೆ, ಮೆಡಿಕಲ್ ವಿಮೆಗಳು ಸಂಬಂಧ ಇರುವ ಕಾನೂನು ಗಳನ್ನು ಅರಿತುಕೊಳ್ಳಬೇಕು ಮತ್ತು ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ಮಾಡಬೇಕು. ರಾಜ್ಯದಲ್ಲಿ ಕರಾವಳಿ ಜನತೆ ಹೆಚ್ಚಿನ ಕಾನೂನು ಅರಿವು ಹೊಂದಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್ ಕಾನೂನು ಹಾಗೂ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಲ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಪ್ರಧಾನ ಕಾರ್ಯದರ್ಶಿ ರಘುನಾಥ ಆಚಾರ್ಯ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ಸ್ವಾಗತಿಸಿದರು. ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಕಾನೂನು ಸಲಹೆಗಾರ ಗಂಗಾಧರ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

ಕಾನೂನು ಮೂಲಕ ಮಾತ್ರ ಸಾಮಾಜಿಕ ಸುಧಾರಣೆ ಮಾಡಲು ಸಾಧ್ಯ. ಕಾನೂನು ಪ್ರಕಾರ ಹಕ್ಕು ಬಾಧ್ಯತೆಗಳನ್ನು ಅರಿತುಕೊಂಡು ಜೀವನ ನಡೆಸುವುದು ಬಹಳ ಅವಶ್ಯಕ. ಕಾನೂನು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ’ -ನ್ಯಾ.ಎಂ.ಐ.ಅರುಣ್, ಕರ್ನಾಟಕ ಹೈಕೋರ್ಟ್”

Leave a Reply

Your email address will not be published. Required fields are marked *

error: Content is protected !!