ಉಡುಪಿ ಜಿಲ್ಲೆಯ ಮತ್ತೆ 4 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್: ಎಸ್ಪಿ ಹರಿರಾಮ್ ಶಂಕರ್

ಉಡುಪಿ, ಫೆ.5: ಜಿಲ್ಲೆಯಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ಲ್ಯಾಕ್ ಸ್ಪಾಟ್‌ಗಳೆಂದು ಗುರುತಿಸಿರುವ 6 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ನಗರದ ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ ಈಗಾಗಲೇ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು ಅವುಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ದಕ್ಷಿಣ ಹಾಗೂ ಉತ್ತರ ದಿಕ್ಕಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನಗರ ಪ್ರವೇಶಿಸುವ ಅಂಬಾಗಿಲು ಹಾಗೂ ಬಲಾಯಿಪಾದೆಗಳಲ್ಲಿ ಸಿಗ್ನಲ್ ಅಳವಡಿಕೆ ಕಾರ್ಯಪ್ರಗತಿ ಯಲ್ಲಿದ್ದು, ಶೇ.60ರಷ್ಟು ಮುಗಿದಿದೆ. ಇನ್ನೆರಡು ಮೂರು ವಾರಗಳಲ್ಲಿ ಅವರು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇವೆಲ್ಲವೂ ಉಡುಪಿ ನಗರಸಭೆಯ ವತಿಯಿಂದ ಅಳವಡಿಕೆಯಾಗುವ ಸಿಗ್ನಲ್‌ಗಳಾಗಿವೆ ಎಂದು ಎಸ್ಪಿ ತಿಳಿಸಿದರು.

ಅದಲ್ಲದೇ ಹೆಚ್ಚುವರಿಯಾಗಿ ಅತೀ ಹೆಚ್ಚು ಅಪಘಾತ ಸಂಭವಿಸುವ ಪಡುಬಿದ್ರಿ ಜಂಕ್ಷನ್, ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್, ಕೋಟ ಮೂರು ಕೈ ಮತ್ತು ಕುಂದಾಪುರ ಸಂಗಮ್ ಸರ್ಕಲ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದವರು ಹೇಳಿದರು.

ಈ ಆರು ಕಡೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುತ್ತವೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಎಲ್ಲ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!