ಉಡುಪಿ ಉಸ್ತುವಾರಿ ಸಚಿವರ ಫ್ಯಾಮಿಲಿ ಟೂರ್‌‌ನಲ್ಲಿ ಲೈಫ್ ಜಾಕೆಟ್ ಧರಿಸದೆ ಬೋಟ್‌ನಲ್ಲಿ ಪ್ರಯಾಣ- ವಿಡಿಯೋ ವೈರಲ್!

ಉಡುಪಿ, ಜ.28: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಗಣರಾಜ್ಯೋತ್ಸವದಂದು ತಮ್ಮ ಫ್ಯಾಮಿಲಿ ಟೂರ್‌ನಲ್ಲಿ ಜಿಲ್ಲಾಡಳಿತದ ಸೂಚನೆಯನ್ನು ಸ್ವತಃ ಉಲ್ಲಂಘಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಹೋದ ಬಳಿಕ‌ ಜಿಲ್ಲೆಗೆ ಕಾಲಿಡ ಸಚಿವರು ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳ‌ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸದೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾದ ಸಚಿವರು ಎಂಬ ವಿರೋಧ ಪಕ್ಷಗಳ ಹೇಳಿಕೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸ್ವಪಕ್ಷದವರೇ ಹೇಳಿಕೊಳ್ಳುತ್ತಿದ್ದಾರೆ. ಇದರ‌ ನಡುವೆಯೇ ಸೋಮವಾರ ನಡೆದ ಗಣರಾಜ್ಯೋತ್ಸಕ್ಕೆ ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆಯ ‌ಪ್ರವಾಸ ಹಮ್ಮಿಕೊಂಡಿದ್ದರು.

 ಅಂದು ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಲು ಬೋಟ್​​ನಲ್ಲಿ ತೆರಳಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ, ಎಸ್ಪಿ ಸಹಿತ ಇತರ ಅಧಿಕಾರಿಗಳು ಲೈಫ್ ಜಾಕೆಟ್ ಧರಿಸದಿರುವ ವಿಡಿಯೋವೀಗ ವೈರಲ್​​ ಆಗಿದೆ. ಈಬಗ್ಗೆ ಸಾರ್ವಜನಿಕರು ಸಚಿವೆ ಹಾಗೂ ಅಧಿಕಾರಿಗಳನ್ನು ‌ ಪ್ರಶ್ನಿಸಲು‌ ಪ್ರಾರಂಭಸಿದ್ದಾರೆ. ಜನರಿಗೆ ಮಾದರಿ ಆಗಿರಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ರೀತಿ ವರ್ತಿಸಿದರೆ ಸಾಮಾನ್ಯ ಜನರು ಕಾನೂನು ಹೇಗೆ‌ ಪಾಲನೆ‌ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಕೋಡಿಬೆಂಗ್ರೆಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದ ಪರಿಣಾಮ ಒಟ್ಟು ಮೂವರು ಮೃತಪಟ್ಟಿದ್ದರು. ಈ ದುರ್ಘಟನೆ ಬಳಿಕ ಲೈಫ್​​ ಜಾಕೆಟ್​​ ಕಡ್ಡಾಯಗೊಳಿಸಿ ಡಿಸಿ ಆದೇಶಿಸಿದ್ದರೂ ಈ ಬಗ್ಗೆ ಹಿಂದಿನಿಂದಲೂ ಜಿಲ್ಲಾಡಳಿತದ ಸೂಚನೆ ಇದೆ. ಆದರೆ ಅದನ್ನು ಉಲ್ಲಂಘಿಸಿ ಜಾಕೆಟ್ ಧರಿಸದೆ ಬೋಟ್​​ನಲ್ಲಿ ನಿಂತು ಸಚಿವರು, ಅಧಿಕಾರಿಗಳು ಕೈಬೀಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜನರಿಗೆ ಹೇಳಬೇಕಿರುವ ಇವರೇ ಹೀಗೆ ನಡೆದುಕೊಂಡರೆ ಹೇಗೆ ಎಂಬ ಮಾತುಗಳೀಗ ಕೇಳಿ ಬಂದಿವೆ.

Leave a Reply

Your email address will not be published. Required fields are marked *

error: Content is protected !!