ವಿಮಾನ ದುರಂತ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಸಹಿತ ಆರು ಮಂದಿ ಮೃತ್ಯು

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಅಜಿತ್ ಪವಾರ್ ಸಹಿತ ಆರು ಮಂದಿ ದುರ್ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಜಿತ್ ಪವಾ‌ರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸಲು ಸಾಮಾನ್ಯವಾಗಿ ಬಳಸುವ ಸಣ್ಣ ವಿಮಾನ ಇದಾಗಿತ್ತು. ಇಂದು ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನವು, ವಿಮಾನ ನಿಲ್ದಾಣ ತಲುಪುವ ಮುನ್ನವೇ ಹೊಲವೊಂದರಲ್ಲಿ ಪತನಗೊಂಡು ಭೀಕರ ಅಪಘಾತಕ್ಕೆ ಒಳಗಾಗಿದೆ.

ಇಂದು ಬೆಳಗ್ಗೆ 8.30ಕ್ಕೆ ದುರಂತ ಸಂಭವಿಸಿದೆ . ಬಾರಾಮತಿಯಲ್ಲಿ ಅಪಘಾತಕ್ಕೀಡಾದ ವಿಮಾನದ ಬಗ್ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನದಲ್ಲಿ ಇನ್ನೂ 2 ಸಿಬ್ಬಂದಿ (1 ಪಿಎಸ್ಒ ಮತ್ತು 1 ಅಟೆಂಡೆಂಟ್) ಮತ್ತು 2 ಸಿಬ್ಬಂದಿ (ಪಿಐಸಿ+ಎಫ್‌ಒ) ಸದಸ್ಯರೊಂದಿಗೆ ಇದ್ದರು. ಆರಂಭಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಯಾರೂ ಅಪಘಾತದಲ್ಲಿ ಬದುಕುಳಿದಿಲ್ಲ ಎಂದು ಹೇಳಿದೆ.

ಮುಂಬೈನಿಂದ ಬೆಳಗ್ಗೆ 8.10ಕ್ಕೆ ವಿಮಾನ ಬಾರಾಮತಿ ಕಡೆ ಪ್ರಯಾಣ ಮಾಡಿತ್ತು. ಇನ್ನೇನು ಬಾರಾಮತಿಯಲ್ಲಿ ಲ್ಯಾಂಡಿಂಗ್‌ ಆಗಬೇಕು ಎನ್ನುವಾಗ ಈ ಅಪಘಾತ ಸಂಭವಿಸಿದೆ. 45XR ಮಾದರಿಯ ಸಣ್ಣ ಏರ್‌ಕ್ರಾಫ್ಟ್‌ ಇದಾಗಿದ್ದು, ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪವಾರ್ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು.

Leave a Reply

Your email address will not be published. Required fields are marked *

error: Content is protected !!