ಲೋಕಾಯುಕ್ತ ದಾಳಿ: 50ಸಾವಿರ ರೂ. ಹಣ ಟಾಯ್ಲಟ್ ಕಮೋಡ್‌ಗೆ ಹಾಕಿದ ಕೃಷಿ ಅಧಿಕಾರಿ!
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೃಷಿ ಇಲಾಖೆಯ ವಿಜಿಲೆನ್ಸ್ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಒಡೆತನದ 4 ಜಿಲ್ಲೆಗಳ ಮನೆಗಳು ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮತ್ತು ಭಾರೀ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ. ಇದೇ ವೇಳೆ 50 ಸಾವಿರ ರೂ. ನೋಟಿನ ಕಂತೆಯನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಿದ್ದಾಗಿ ಹೇಳಿದ್ದಾರೆ.

ನಾಲ್ಕು ಜಿಲ್ಲೆಗಳಲ್ಲಿ ದಾಳಿ: ಬೆಳಗಾವಿ ಕೃಷಿ ಇಲಾಖೆಯಲ್ಲಿ ವಿಜಿಲೆನ್ಸ್ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಈ ಹಿಂದೆ ಧಾರವಾಡ ಕೃಷಿ ಇಲಾಖೆಯ ಉಪ ನಿರ್ದೇಶಕರಾಗಿದ್ದ ರಾಜಶೇಖರ ಬಿಜಾಪುರ ಅವರ ಅಕ್ರಮ ಆಸ್ತಿಗಳಿಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕಾಯುಕ್ತ ಎಸ್.ಪಿ. ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಬೆಳಗಾವಿ, ಧಾರವಾಡ (ಕೆಳಗೇರಿ ಮತ್ತು ಸನ್ಮತಿನಗರದ ಮನೆಗಳು), ಹಾವೇರಿ ಮತ್ತು ಚಿತ್ರದುರ್ಗದಲ್ಲಿರುವ ಅವರ ಮನೆಗಳ ಮೇಲೆ ದಾಳಿ ನಡೆಸಲಾಯಿತು.






