ತಮಿಳು ನೆಲದಲ್ಲಿ ರಾಮಾಯಣದ ಹೆಗ್ಗುರುತು: ಪೇಜಾವರಶ್ರೀ
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸ್ಥಳವು ಮರಳು ಮಿಶ್ರಿತ ಜೌಗುಮಣ್ಣಿನದಾಗಿದ್ದು ಮಂದಿರಕ್ಕೆ ಭವಿಷ್ಯದಲ್ಲಿ ಯಾವುದೇ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಭೂಮಿಯ ಧಾರಣ ಸಾಮರ್ಥ್ಯ ಅಧ್ಯಯನ ನಡೆಯುತ್ತಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಚೆನ್ನೈನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಿರ ನಿರ್ಮಾಣದ ಉಸ್ತುವಾರಿಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದೆ. ಜ.15ರಿಂದ ಫೆ.27ರವರೆಗೆ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣಾ ಅಭಿಯಾನ ನಡೆಯಲಿದೆ. ₹ 1,400 ಕೋಟಿ ಅಂದಾಜು ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದರು. ತಮಿಳು ನೆಲ, ಭಾಷೆ ಸಂಸ್ಕೃತಿಯಲ್ಲೂ ರಾಮಾಯಣದ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿವೆ. ಭರತನಾಟ್ಯದಂಥ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತುಗಳು ಕಾಣಿಸುತ್ತಿವೆ. ಧನುಷ್ಕೋಟಿ, ರಾಮಸೇತು, ರಾಮೇಶ್ವರದಂಥಹ ಪವಿತ್ರ ಸ್ಥಳಗಳು ತಮಿಳುನಾಡಿನಲ್ಲಿರುವುದು ರಾಮಾಯಣದೊಂದಿಗಿನ ನಂಟಿಗೆ ಸಾಕ್ಷಿ ಎಂದು ಪೇಜಾವರ ಶ್ರೀಗಳು ಹೇಳಿದರು. |